ಅಘನಾಶಿನಿಯ ಒಡಲಲ್ಲಿ ಅಕ್ರಮ ಮರಳು ದಂಧೆ

Update: 2016-08-02 16:51 GMT

ಕಾರವಾರ, ಆ.2: ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ ನದಿಯಲ್ಲಿ ಮರಳು ಮಾಫಿಯಾಗಳ ಹಾವಳಿ ಹೆಚ್ಚಿದೆ. ಈ ಬಗ್ಗೆ ಸಾಕಷ್ಟು ಭಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮರಳು ಗಾರಿಕೆಗೆ ಅವಕಾಶ ನೀಡಬಾರದು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮೀನುಗಾರರು ಆಗ್ರಹಿಸಿದ್ದಾರೆ. ಅಘನಾಶಿನಿಯ ನದಿಯಲ್ಲಿ ಸತತ ಮರಳುಗಾರಿಕೆ ನಡೆಯುತ್ತಿರುವುದರಿಂದ ಮೀನುಗಾರರ ಬದುಕು ನಾಶದ ಅಂಚಿಗೆ ತಲುಪಿದೆ. ನದಿಯಲ್ಲಿ ದೊರೆಯುವ ಕಲಗ, ಬೆಳಚು(ಚಿಪ್ಪಿಕಲ್ಲು), ಏಡಿ, ಸಿಗಡಿ, ಹಾಗೂ ವಿವಿಧ ಜಾತಿಯ ಮೀನುಗಳು ಮರಳುಗಾರಿಕೆಯ ಆರ್ಭಟಕ್ಕೆ ಸಿಲುಕಿ ನಾಶವಾಗಿವೆ. ಇದರಿಂದ ಮೀನು ಗಾರರ ಬದುಕು ದುಸ್ತರವಾಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತ ಪಡಿಸಿದ್ದಾರೆ.

 ಕಳೆದ ನಾಲ್ಕು ವರ್ಷಗಳಿಂದ ಅಘನಾಶಿನಿ ನದಿಯ ಅಂಚಿನಲ್ಲಿರುವ ಮಿರ್ಜಾನ್, ಹೆಗಡೆ, ಕೋಡ್ಕಣಿ, ಸಶಿಹಿತ್ಲ, ಲುಕ್ಕೇರಿ ದಿವಗಿ ಹಾಗೂ ಮಣಕೋಣ ಮುಂತಾದ ಪ್ರದೇಶದಲ್ಲಿ ಇಂದು ಮರಳುಗಾರಿಕೆಯ ಹಾವಳಿ ಹೆಚ್ಚಿದೆ. ಮರಳುಗಾರಿಕೆ ಹೆಚ್ಚಿದ ಪರಿಣಾಮ ಮೀನುಗಳ ಸಂತತಿಗಳು ಕಾಣಸಿಗುತ್ತಿಲ್ಲ. ಇದೇ ಸ್ಥಿತಿ ಮುಂದುವರಿದರೆ ಮುಂದಿನ ದಿನದಲ್ಲಿ ಮೀನುಗಾರರು ಉದ್ಯೋಗವಿಲ್ಲದೆ ಊರು ತೊರೆಯಬೇಕಾದ ಸ್ಥಿತಿ ನಿರ್ಮಾಣವಾಗುವುದನ್ನು ಜಿಲ್ಲಾಡಳಿತ ತಪ್ಪಿಸ ಬೇಕಾಗಿದೆ ಎಂದು ಕೋರಿದ್ದಾರೆ. ಸ್ಥಳೀಯ ಮೀನುಗಾರ ಮುಖಂಡರು ಹಾಗೂ ಜನಪ್ರತಿನಿಧಿಗಳು ಹೊರ ರಾಜ್ಯಗಳ ಮರಳು ವ್ಯಾಪಾರಿಗಳೊಂದಿಗೆ ಕೈ ಜೋಡಿಸಿದ್ದು, ಸ್ಥಳೀಯ ಮೀನುಗಾರರಿಗೆ ಯಾರ ಬೆಂಬಲು ಲಭಿಸುತ್ತಿಲ್ಲ. ಅಲ್ಲದೆ, ಮಿರ್ಜಾನ್ ತಾರೀಬಾಗಿಲಿನ ನಿವಾಸಿಗಳಿಗೆ ರಾತ್ರಿ ಹಗಲು ಎನ್ನದೆ ಓಡಾಡುವ ಮರಳು ತುಂಬಿದ ಲಾರಿ ಕಿರಿಕಿರಿ ಉಂಟುಮಾಡುತ್ತಿದೆ. ಹೊರ ರಾಜ್ಯಗಳ ಅನೇಕ ಕಾರ್ಮಿಕರು ಮರಳು ತೆಗೆಯುವ ಕೆಲಸದಲ್ಲಿ ತೊಡಗಿಕೊಂಡು ಈ ಪ್ರದೇಶದಲ್ಲಿ ವಾಸವಾಗಿದ್ದುಕೊಂಡು ಗಾಂಜಾ ಸೇವನೆ ಸೇರಿದಂತೆ ಊರಿನ ಹೆಣ್ಣು ಮಕ್ಕಳಿಗೆ ಕಿರುಕುಳು ನೀಡುತ್ತಿದ್ದಾರೆ ಎಂದು ದೂರಿದ್ದಾರೆ.

ಅಘನಾಶಿನಿಯಲ್ಲಿ ಅಕ್ರಮವಾಗಿ ಮರಳು ತೆಗೆಯುವುದಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಂಪೂರ್ಣವಾಗಿ ಸಹಕರಿಸುತ್ತಿದ್ದಾರೆ. ಇದರಿಂದಾಗಿ ಮರಳುಗಣಿಗಾರಿಕೆ ನಡೆಸುವವರು ಯಾವುದೇ ಭಯವಿಲ್ಲದೆ ಅಕ್ರಮ ದಂಧೆ ನಡೆಸುತ್ತಿದ್ದಾರೆ. ಈ ಹಿಂದಿನ ಜಿಲ್ಲಾಧಿಕಾರಿಯವರಿಗೆ ಈ ಬಗ್ಗೆ ಅನೇಕ ಬಾರಿ ದೂರು ಸಲ್ಲಿಸಿದ ಬಳಿಕ ಕೆಲವು ತಿಂಗಳುಗಳ ಕಾಲ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲಾಗಿತ್ತು. ಈಗ ಮತ್ತೆ ಮರಳು ಗಣಿಗಾರಿಕೆ ಪ್ರಾರಂಭಗೊಂಡಿದ್ದು, ಈ ಬಗ್ಗೆ ಜಿಲ್ಲಾಡಳಿತ ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಮೀನುಗಾರರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News