ಕೇಂದ್ರ ಗ್ರಿಡ್‌ಗೆ 1,500 ಮೆ.ವ್ಯಾ. ವಿದ್ಯುತ್ ವಾಪಸ್: ಸಚಿವ ಶಿವಕುಮಾರ್
ಬೆಂಗಳೂರು, ಆ. 2: ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಬೇಡಿಕೆ ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಆ ಹಿನ್ನೆಲೆಯಲ್ಲಿ 1500 ಮೆ.ವ್ಯಾ. ವಿದ್ಯುತ್ ಅನ್ನು ಕೇಂದ್ರ ಗ್ರಿಡ್‌ಗೆ ಹಿಂದಿರುಗಿಸುತ್ತಿದ್ದೇವೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಹೇಳಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಂದರ್ಭದಲ್ಲಿ ರಾಜ್ಯದಲ್ಲಿ ಏಳು ಸಾವಿರ ಮೆ.ವ್ಯಾ. ವಿದ್ಯುತ್ ಬೇಡಿಕೆಯಿದ್ದು, ಜಲ ವಿದ್ಯುತ್ ಸೇರಿದಂತೆ ವಿವಿಧ ಮೂಲಗಳಿಂದ ಅಷ್ಟೇ ಪ್ರಮಾಣದ ವಿದ್ಯುತ್ ಲಭ್ಯವಾಗುತ್ತಿದೆ. ಹೀಗಾಗಿ ಕೇಂದ್ರ ಗ್ರಿಡ್‌ಗೆ ವಿದ್ಯುತ್ ವಾಪಸ್ ನೀಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.
ರಾಜ್ಯದಲ್ಲಿನ ಪವನ (ವಿಂಡ್) ವಿದ್ಯುತ್ ಯೋಜನೆಗಳಿಂದ 1800 ಮೆ.ವ್ಯಾ ವಿದ್ಯುತ್ ದೊರೆಯುತ್ತಿದೆ. ಅಲ್ಲದೆ, ವಿವಿಧ ಮೂಲಗಳಿಂದ ಸಾಕಷ್ಟು ಪ್ರಮಾಣ ವಿದ್ಯುತ್ ಲಭ್ಯತೆ ಹಿನ್ನೆಲೆಯಲ್ಲಿ ಮುಂದಿನ ಅಕ್ಟೋಬರ್ ವರೆಗೂ ವಿದ್ಯುತ್ ಬೇಡಿಕೆ ಹೆಚ್ಚಾಗುವುದಿಲ್ಲ ಎಂದು ಹೇಳಿದರು.
ರೈತರಿಗೆ ತೊಂದರೆ ಬೇಡ: ಕೃಷಿ ಭೂಮಿಯಲ್ಲಿ ಸೌರಶಕ್ತಿ ಪ್ಯಾನಲ್ ಅಳವಡಿಕೆ ಯೋಜನೆ ಸಂಬಂಧ ರೈತರಿಗೆ ತೊಂದರೆ ಸಲ್ಲ. ಯೋಜನೆಗೆ ಭೂಮಿ ನೀಡುವ ಸಂಬಂಧ ನಿಯಮಗಳನ್ನು ಸರಳೀಕರಣಗೊಳಿಸಲಾಗಿದೆ ಎಂದರು.
ಸೌರವಿದ್ಯುತ್ ಯೋಜನೆ ಸಂಬಂಧ ಜಮೀನು ಮಾಲಕರು ಹಾಗೂ ಕೆಲ ಕಂಪೆನಿಗಳ ಮಧ್ಯೆ ಸಮಸ್ಯೆ ಸೃಷ್ಟಿಯಾಗಿದ್ದು ಶೀಘ್ರದಲ್ಲೆ ಅದನ್ನು ನಿವಾರಿಸಲಾಗುವುದು ಎಂದು ಅವರು, ರೈತರಿಗೆ ಕಿರುಕುಳ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.