ರಾಜ್ಯಪಾಲ ಹಠಾವೋ ಚಳವಳಿ: ಎಚ್ಚರಿಕೆ
ಬೆಂಗಳೂರು, ಆ. 2: ಸರಕಾರಿ ಕಾಮಗಾರಿಗಳಲ್ಲಿ ಪರಿಶಿಷ್ಟರಿಗೆ ಮೀಸಲಾತಿ ಕಲ್ಪಿಸುವ ಮಹತ್ವದ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕದೆ ರಾಷ್ಟ್ರಪತಿಗೆ ರವಾನಿಸಿದ ಕ್ರಮ ಖಂಡಿಸಿ ‘ರಾಜ್ಯಪಾಲ ಹಠಾವೋ ಕರ್ನಾಟಕ ಬಚಾವೋ’ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಗುತ್ತಿಗೆದಾರರ ಸಂಘ ಎಚ್ಚರಿಸಿದೆ.
ಮಂಗಳವಾರ ಪ್ರೆಸ್‌ಕ್ಲಬ್‌ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ದಲಿತ ಸಮುದಾಯದ ನಿರುದ್ಯೋಗಿ ಯುವಕರ ಆರ್ಥಿಕ ಸಬಲೀಕರಣದ ಉದ್ದೇಶದಿಂದ ರಾಜ್ಯ ಸರಕಾರ ಜಾರಿ ತಂದಿದ್ದ ವಿಧೇಯಕಕ್ಕೆ ರಾಜ್ಯಪಾಲ ವಿ.ಆರ್.ವಾಲಾ ಅನುಮೋದನೆ ನೀಡಿಲ್ಲ ಎಂದು ದೂರಿದರು.
ಈ ಹಿಂದೆಯೇ ರವಾನಿಸಿದ್ದ ‘ಸುಗ್ರೀವಾಜ್ಞೆ’ಗೂ ಅಂಕಿತ ಹಾಕದೆ ಸರಕಾರಕ್ಕೆ ವಾಪಸ್ ಕಳುಹಿಸಿದ್ದರು. ಇದೀಗ ವಿಧಾನಮಂಡಲ ಉಭಯ ಸದನಗಳಲ್ಲಿ ಅನುಮೋದಿಸಿದ್ದ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕದೆ ತಮ್ಮ ಮನುಸ್ಮತಿ ನೀತಿಯನ್ನು ಈ ಮೂಲಕ ಬಹಿರಂಗಪಡಿಸಿದ್ದಾರೆಂದು ಮಹದೇವಸ್ವಾಮಿ ವಾಗ್ದಾಳಿ ನಡೆಸಿದರು.
ಸಂವಿಧಾನದಲ್ಲಿ ಪರಿಶಿಷ್ಟರಿ ಜಾತಿ/ವರ್ಗಗಳಿಗೆ ವಿಶೇಷ ಮೀಸಲಾತಿ ಕಲ್ಪಿಸಲು ಅವಕಾಶವಿಲ್ಲ ಎಂಬ ಸಬೂಬನ್ನು ರಾಜ್ಯಪಾಲರು ಹೇಳಿದ್ದಾರೆ. ಆದರೆ, ಪರಿಶಿಷ್ಟರಿಗೆ ಮೀಸಲಾತಿ ಕಲ್ಪಿಸಲು ಸಂವಿಧಾನದಲ್ಲಿ ಅವಕಾಶವಿದೆ ಎಂದು ಸಮರ್ಥಿಸಿದ ಅವರು, ಪರಿಶಿಷ್ಟರ ಆರ್ಥಿಕ ಸಬಲೀಕರಣದ ವಿಧೇಯಕಕ್ಕೆ ರಾಜ್ಯಪಾಲರ ಆರೆಸ್ಸೆಸ್ ಮನಸ್ಸು ಒಪ್ಪಿಲ್ಲ ಎಂದು ಟೀಕಿಸಿದರು.