ದನ ಕಳವು ಆರೋಪ: ವ್ಯಕ್ತಿಯ ಅರೆನಗ್ನಗೊಳಿಸಿ ಥಳಿತ; ಮೆರವಣಿಗೆ

Update: 2016-08-03 14:37 GMT

ಭಟ್ಕಳ, ಆ.3: ದನ ಕರುವೊಂದನ್ನು ಕಳವು ಮಾಡಿದ್ದಾನೆ ಎಂದು ಆರೋಪಿಸಿ ಸಂಘಪರಿವಾರ ಸಂಘಟನೆಯ ಕಾರ್ಯಕರ್ತರು ವ್ಯಕ್ತಿಯ ಮೇಲೆ ಹಲ್ಲೆ ಮಾಡಿದಲ್ಲದೆ ಆತನ ಬಟ್ಟೆ ಬಿಚ್ಚಿ ಟೊಂಕಕ್ಕೆ ಹಗ್ಗ ಕಟ್ಟಿ ಸಾರ್ವಜನಿಕವಾಗಿ ಮೆರವಣಿಗೆ ನಡೆಸಿದ ಕೃತ್ಯ ಬುಧವಾರ ನಡೆದಿದೆ.

ಹಲ್ಲೆಗೊಳಗಾಗಿರುವ ವ್ಯಕ್ತಿಯನ್ನು ಪುರವರ್ಗ ನಿವಾಸಿ ಶೇಖರ್ ಮಂಜಯ್ಯ ನಾಯ್ಕಎಂದು ಗುರುತಿಸಲಾಗಿದೆ. ಪೊಲೀಸರ ಸಮ್ಮುಖದಲ್ಲೇ ಈ ಕೃತ್ಯ ನಡೆದಿದ್ದರೂ ಅವರು ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ. ಬದಲಿಗೆ ನಗರಠಾಣಾ ಪಿಎಸೈ ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡು ಥಳಿತಕ್ಕೊಳಗಾದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಮಂಜಯ್ಕ ನಾಯ್ಕ ಎಂಬವರ ಬಟ್ಟೆ ಬಿಚ್ಚಿದ್ದಲ್ಲದೆ ಸಂಘಪರಿವಾರ ಕಾರ್ಯಕರ್ತರು ಸಾರ್ವಜನಿಕವಾಗಿ ಬೆಲ್ಟ್‌ನಿಂದ ಥಳಿಸಿದ್ದಾರೆ. ಬಳಿಕ ಕರುವಿನ ಹಗ್ಗವನ್ನು ವ್ಯಕ್ತಿಯ ಸೊಂಟಕ್ಕೆ ಕಟ್ಟಿ ಮೆರವಣಿಗೆ ಮಾಡಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಇವೆಲ್ಲವೂ ಪೊಲೀಸರ ಸಮ್ಮುಖದಲ್ಲೇ ನಡೆದಿದೆಯಾದರೂ ಈ ಬಗ್ಗೆ ಅವರು ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ ಎಂದೂ ಆರೋಪಿಸಿದ್ದಾರೆ.

ಗುಜರಾತ್‌ನಲ್ಲಿ ದಲಿತರ ಮೇಲೆ ಗೋರಕ್ಷಕರಿಂದ ಹಲ್ಲೆ ನಡೆಯುತ್ತಿರುವ ಬೆನ್ನಿಗೇ ಭಟ್ಕಳದಲ್ಲಿ ನಡೆದಿರುವ ಘಟನೆ ಸಾರ್ವಜನಿಕರನ್ನು ಆಕ್ರೋಶಕ್ಕೆ ಈಡು ಮಾಡಿದೆ. ಒಂದು ವೇಳೆ ದನಕಳವು ಮಾಡಿದ್ದರೂ ಸಂಘಪರಿವಾರ ಕಾರ್ಯಕರ್ತರು ಕಾನೂನನ್ನು ಕೈಗೆತ್ತಿಕೊಂಡಿರುವುದು ಎಷ್ಟು ಸರಿ? ಎಂದು ಅವರು ಪ್ರಶ್ನಿಸುತ್ತಿದ್ದಾರೆ. ದಲಿತರ ಮೇಲಿನ ಹಲ್ಲೆ ಇದೀಗ ಗುಜರಾತ್‌ನಿಂದ ಕರ್ನಾಟಕಕ್ಕೂ ವಿಸ್ತರಿಸುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News