×
Ad

ನಗರಸಭೆಯಿಂದ ‘ಎಲ್ಲರಿಗೂ ಮನೆ’ ಯೋಜನೆ ಅನುಷ್ಠಾನ

Update: 2016-08-03 22:13 IST

 ಮಡಿಕೇರಿ, ಆ.3: ನಗರ ಪ್ರದೇಶದ ವಿವಿಧ ವಸತಿ ಯೋಜನೆಗಳನ್ನು ಕೇಂದ್ರ ಸರಕಾರದ ಪ್ರಧಾನ ಮಂತ್ರಿಗಳ ಆವಾಜ್ ಯೋಜನೆಯೊಂದಿಗೆ ಸಂಯೋಜಿಸಿ ಹೌಸಿಂಗ್ ಫಾರ್ ಆಲ್, ‘ಎಲ್ಲರಿಗೂ ಮನೆ’ ಎನ್ನುವ ವಸತಿ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯನ್ನು ರಾಜ್ಯ ಸರಕಾರದ ಸಹಯೋಗದೊಂದಿಗೆ ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲೂ ಅನುಷ್ಠಾನಗೊಳಿಸಲು ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಎಂದು ನಗರಸಭಾ ಅಧ್ಯಕ್ಷೆ ಶ್ರೀಮತಿ ಬಂಗೇರ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಬಡ ಕುಟುಂಬಕ್ಕೆ ವಸತಿ ಸಿಗಬೇಕೆನ್ನುವ ಉದ್ದೇಶದಿಂದ ಸರಕಾರ ಈ ಯೋಜನೆಯನ್ನು ಜಾರಿಗೆ ತಂದಿದ್ದು, 2020ರ ವೇಳೆ ಪ್ರತಿಯೊಂದು ಕುಟುಂಬಕ್ಕೆ ವಸತಿ ಇರಬೇಕೆನ್ನುವ ಗುರಿಯನ್ನು ಹೊಂದಲಾಗಿದೆ. ಈ ನಿಟ್ಟಿನಲ್ಲಿ ನಗರಸಭಾ ವ್ಯಾಪ್ತಿಯ ಫಲಾನುಭವಿಗಳಿಂದಲೂ ಅರ್ಜಿಯನ್ನು ಆಹ್ವಾನಿಸಲಾಗುತ್ತಿದೆ ಎಂದು ತಿಳಿಸಿದರು. ಭೂಮಿಯನ್ನು ಸಂಪನ್ಮೂಲವನ್ನಾಗಿಸಿಕೊಂಡು ಕೊಳಚೆ ಪ್ರದೇಶವನ್ನು ಅಭಿವೃದ್ಧಿ ಪಡಿಸುವುದು, ಕ್ರೆಡಿಟ್ ಲಿಂಕ್ ಸಹಾಯಧನ ವಿತರಿಸುವುದು. ಪಾಲುದಾರಿಕೆ ಮೂಲಕ ಮನೆ ನಿರ್ಮಿಸುವುದು ಮತ್ತು ಫಲಾನುಭವಿಗಳಿಗೆ ಪ್ರತ್ಯೇಕ ಮನೆ ನಿರ್ಮಾಣ ಅಥವಾ ವರ್ಧನೆ ಎನ್ನುವ ನಾಲ್ಕು ಸೌಲಭ್ಯಗಳು ವಸತಿ ಯೋಜನೆಯಲ್ಲಿ ಅಡಕವಾಗಿದೆ. ಸಹಾಯಧನ ಯೋಜನೆಯಡಿ 6 ಲಕ್ಷ ರೂ.ವರೆಗಿನ ಸಾಲಕ್ಕೆ ಸರಕಾರದಿಂದ ಶೇ.6.5ರಷ್ಟು ಸಹಾಯಧನ ನೀಡಲಾಗುತ್ತಿದೆ. ಆದರೆ ಅಸಲನ್ನು ಫಲಾನುಭವಿಗಳೇ ಭರಿಸಬೇಕಾಗುತ್ತದೆ ಎಂದು ಶ್ರೀಮತಿ ಬಂಗೇರ ಮಾಹಿತಿ ನೀಡಿದರು.

ನಗರಸಭೆಯ ಹಿರಿಯ ಸದಸ್ಯ ಕೆ.ಎಂ.ಗಣೇಶ್ ಮಾತನಾಡಿ, ನಗರಸಭೆ ವ್ಯಾಪ್ತಿಯ ಇಂದಿರಾನಗರ, ಚಾಮುಂಡೇಶ್ವರಿ ನಗರ, ಮಂಗಳಾದೇವಿ ನಗರ, ತ್ಯಾಗರಾಜ ಕಾಲನಿ, ಜ್ಯೋತಿ ನಗರ, ಪುಟಾಣಿ ನಗರ, ಮಲ್ಲಿಕಾರ್ಜುನ ನಗರ, ಮತ್ತು ರಾಜರಾಜೇಶ್ವರಿ ನಗರಗಳನ್ನು ಕೊಳಚೆ ಪ್ರದೇಶ ಎಂದು ಗುರುತಿಸಲಾಗಿದ್ದು, ಇಲ್ಲಿ ಕೂಡ ವಸತಿ ಯೋಜನೆಯನ್ನು ಕೊಳಚೆ ನಿರ್ಮೂಲನ ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.

ನಗರಸಭೆ ವ್ಯಾಪ್ತಿಯ ಫಲಾನುಭವಿಗಳಿಗೆ ವಸತಿಯನ್ನು ಕಲ್ಪಿಸಲು ಕರ್ಣಂಗೇರಿ ವ್ಯಾಪ್ತಿಯಲ್ಲಿ 16 ಎಕರೆ ಜಾಗ ಗುರುತಿಸಲಾಗಿದ್ದು, ಇದನ್ನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಫಲಾನುಭವಿಗಳ ಆದಾಯವನ್ನು ದೃಢೀಕರಿಸಿಕೊಳ್ಳುವುದಕ್ಕಾಗಿ ಮತ್ತು ವಸತಿ ಯೋಜನೆಗೆ ಅರ್ಹರೇ ಎಂದು ಖಾತ್ರಿ ಪಡಿಸಿಕೊಳ್ಳುವುದಕ್ಕಾಗಿ ಸಮೀಕ್ಷೆಗಾಗಿ ನಗರದ 23 ವಾರ್ಡ್‌ಗಳಲ್ಲಿ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ನೂತನ ಖಾಸಗಿ ಬಸ್ ನಿಲ್ದಾಣಕ್ಕಾಗಿ ಈಗಾಗಲೇ ಐದು ಕೋಟಿ ರೂ. ಮಂಜೂರಾಗಿದ್ದು, ಮಳೆ ಪ್ರಮಾಣ ಕಡಿಮೆಯಾದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು. ಕಾವೇರಿ ಕಲಾಕ್ಷೇತ್ರ ಅಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ 35 ಕೋಟಿ ರೂ. ಮೀಸಲಿದ್ದು, ಈಗ ನಡೆಯುತ್ತಿರುವ ಕಾಮಗಾರಿಗಳು ಪೂರ್ಣಗೊಂಡ ತಕ್ಷಣ ಈ ಅನುದಾನದ ಕಾಮಗಾರಿಗಳು ಆರಂಭಗೊಳ್ಳಲಿವೆ ಎಂದು ಕೆ.ಎಂ.ಗಣೇಶ್ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ಲೀಲಾ ಶೇಷಮ್ಮ, ಮಾಜಿ ಅಧ್ಯಕ್ಷೆ ಝುಲೇಕಾಬಿ ಹಾಗೂ ಸದಸ್ಯೆ ಚುಮ್ಮಿ ದೇವಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News