ಶಿವಮೊಗ್ಗ: ತುಂಗಾ ಎಡ-ಬಲದಂಡೆ ನಾಲೆ ಸ್ವಚ್ಛತಾ ಕಾರ್ಯ ವಿಳಂಬ
ಶಿವಮೊಗ್ಗ, ಆ.3: ತುಂಗಾ ಎಡದಂಡೆ ಮತ್ತು ಬಲದಂಡೆ ನಾಲೆಯಲ್ಲಿ ತುಂಬಿರುವ ಹೂಳು, ಬೆಳೆದಿರುವ ಗಿಡಗಂಟಿಗಳನ್ನು ಸಮರೋಪಾದಿಯಲ್ಲಿ ತೆಗೆಯಬೇಕು. ಕಾಲಮಿತಿಯಲ್ಲಿ ಈ ಕೆಲಸ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಎಚ್. ಸಿ.ಬಸವರಾಜಪ್ಪ ಆಗ್ರಹಿಸಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾಲೆಯಿಂದ ಅಚ್ಚುಕಟ್ಟು ಪ್ರದೇಶಕ್ಕೆ ಒಂದೂವರೆ ತಿಂಗಳ ಹಿಂದೆಯೇ ನೀರು ಹರಿಸಬೇಕಿತ್ತು. ಆದರೆ ಇನ್ನೂ ನೀರು ಹರಿಸಿಲ್ಲ. ಇದರಿಂದ ಭತ್ತ ನಾಟಿಮಾಡಲು ರೈತರು ತೊಂದರೆ ಎದುರಿಸುವಂತಾಗಿದೆ ಎಂದು ದೂರಿದ್ದಾರೆ. ಕಳೆದ ವರ್ಷ ಹೊಳಲೂರಿನಿಂದ ಹೊನ್ನಾಳಿವರೆಗೆ ನೀರು ತಲುಪದೆ ಭತ್ತದ ಬೆಳೆ ಒಣಗಿ ರೈತರಿಗೆ ಅಪಾರ ಪ್ರಮಾಣದ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ನಾಲೆಯಲ್ಲಿ ಬೆಳೆದಿರುವ ಗಿಡಗಂಟಿ, ಕಸಕಡ್ಡಿ ತೆರವುಗೊಳಿಸಲು ಕೂಡಲೇ ನೀರಾವರಿ ಇಲಾಖೆಯು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಪ್ರಸ್ತುತ ಕೇವಲ 3 ಇಟಾಚಿ ಯಂತ್ರ ಬಳಕೆ ಮಾಡಿ ಎಡ ಹಾಗೂ ಬಲದಂಡೆ ನಾಲೆಗಳ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ಇದರಿಂದ ಸ್ವಚ್ಛತಾ ಕಾರ್ಯ ವಿಳಂಬವಾಗುತ್ತಿದೆ. 15 ರಿಂದ 20 ಇಟಾಚಿ ಬಳಸಿ ಸ್ವಚ್ಛಗೊಳಿಸುವ ಕಾರ್ಯ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ನೀರು ಬಿಟ್ಟ ಮೇಲೆ ಕಾಟಾಚಾರಕ್ಕೆ ಜೆಸಿಬಿ ಮತ್ತು ಇಟಾಚಿಗಳ ಮೂಲಕ ಕೆಲಸ ಮಾಡಿ, ಬಿಲ್ ಪಡೆಯುವ ಕೆಲಸ ನಡೆಯುತ್ತಿದೆ. ಇದರಿಂದ ಯಾವುದೇ ಕಾಮಗಾರಿ ಪರಿಪೂರ್ಣವಾಗುತ್ತಿಲ್ಲ. ಈ ಬಾರಿ ಕೂಡಲೇ ತ್ವರಿತಗತಿಯಲ್ಲಿ ಕಾಮಗಾರಿ ಕೈಗೆತ್ತಿಕೊಂಡು ನಾಲಾ ವ್ಯಾಪ್ತಿಯ ಜಮೀನುಗಳಿಗೆ ನೀರು ತಲುಪಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.