×
Ad

ವೈಜ್ಞ್ಞಾನಿಕ ವಿಧಾನ ಅಳವಡಿಸಿಕೊಳ್ಳಲು ರೈತರಿಗೆ ಸಲಹೆ

Update: 2016-08-03 22:16 IST

ಶಿವಮೊಗ್ಗ, ಆ.3: ಪ್ರಸಕ್ತ ಸಾಲಿನಲ್ಲಿ ಮುಂಗಾರು ದುರ್ಬಲ ಹಾಗೂ ಭದ್ರಾ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆ ಆಗಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯದ ನೀರಿನ ಸಂಗ್ರಹ ನಿರೀಕ್ಷೆಯ ಮಟ್ಟವನ್ನು ತಲುಪಿಲ್ಲ.

 ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೊಳಪಡುವ ರೈತರು ವೈಜ್ಞ್ಞಾನಿಕ ವಿಧಾನಗಳನ್ನು ಅಳವಡಿಸಿಕೊಂಡು ಕಡಿಮೆ ನೀರಿನಲ್ಲಿ ಭತ್ತ ಬೆಳೆಯುವ ಆಧುನಿಕ ವಿಧಾನ ಅನುಸರಿಸುವಂತೆ ಬೆಂಗಳೂರು ಕೃಷಿ ತಂತ್ರಜ್ಞರ ಸಂಸ್ಥೆಯ ಉಪಾಧ್ಯಕ್ಷರು ಹಾಗೂ ಸೆಮಿನಾರ್ ಆ್ಯಂಡ್ ಎಂಡೋಮೆಂಟ್ ಉಪಸಮಿತಿಯ ಅಧ್ಯಕ್ಷ ಡಾ.ಜಿ.ಈಶ್ವರಪ್ಪ ಹೇಳಿದ್ದಾರೆ.

ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಗಳ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ನೀರಿನ ಸದ್ಬಳಕೆ ಹಾಗೂ ಭತ್ತದ ಬೆಳೆ ಮತ್ತು ಪರ್ಯಾಯ ಬೆಳೆಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶದ ಆಡಳಿತ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

  ಪ್ರತೀ ವರ್ಷವೂ ವಾಡಿಕೆಯಂತೆ ಮಳೆಯ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಕಾಲಕಾಲಕ್ಕೆ ನೀರನ್ನು ತಡೆದು ನಿಲ್ಲಿಸಿ -ಬಿಡುವ ವಿಧಾನದಲ್ಲಿ ನೀರನ್ನು ಬಿಡಲು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಈವರೆಗೆ ಬಂದಿರುವ ಮಳೆಯನ್ನು ಗಮನಿಸಿದಲ್ಲಿ ನಿಗದಿಪಡಿಸಿದ ಮಾದರಿಯಲ್ಲಿ ನೀರನ್ನು ಬಳಸಿದಲ್ಲಿ ಮುಂದಿನ ಎರಡು ತಿಂಗಳಲ್ಲಿ ಸಂಗ್ರಹವಾಗಿರುವ ನೀರು ಪೂರ್ಣ ಪ್ರಮಾಣದಲ್ಲಿ ಬರಿದಾಗಲಿದೆ. ಕಡಿಮೆ ನೀರಿನಲ್ಲಿ ಭತ್ತವನ್ನು ಬೆಳೆಯುವ ವೈಜ್ಞ್ಞಾನಿಕ ವಿಧಾನಗಳು ಹಾಗೂ ನೀರಿನ ಲಭ್ಯತೆಗನುಗುಣವಾಗಿ ಪರ್ಯಾಯ ಬೆಳೆಯನ್ನು ಬೆಳೆಯಲು ರೈತರು ಮುಂದಾಗುವಂತೆ ಅವರು ತಿಳಿಸಿದರು.

ಮುಂಜಾಗ್ರತಾ ಕ್ರಮಗಳಿಂದ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಕಾಪಾಡಿಕೊಳ್ಳಬಹುದಾಗಿದೆ. ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರಿನ ಲಭ್ಯತೆಯ ಕುರಿತು ವಾಸ್ತವ ಸ್ಥಿತಿಗತಿಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕಾದ ತುರ್ತು ಅಗತ್ಯವಿದೆ. ತಪ್ಪಿದಲ್ಲಿ ಸಹಜವಾಗಿ ರೈತರು ಸಂಕಷ್ಟಕ್ಕೀಡಾಗಲಿದ್ದಾರೆ. ಮುಂದಿನ ದಿನಗಳಲ್ಲಿ ರೈತರು ಇಲಾಖೆಗಳ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಬಹುದು ಎಂದು ನುಡಿದರು.

ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಭತ್ತದ ಬೆಳೆ ಬೆಳೆಯಲು ಆಧುನಿಕ ತಂತ್ರಜ್ಞಾನ ಅಳವಡಿಕೆ, ಕಡಿಮೆ ನೀರಿನ ಬಳಕೆ ಹಾಗೂ ಉತ್ತಮ ಇಳುವರಿ ಪಡೆಯುವ ವಿಧಾನಗಳ ಕುರಿತು ತಜ್ಞರಿಂದ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆಗಳನ್ನು ಶೀಘ್ರದಲ್ಲಿ ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳ ಆಯ್ದ ಪ್ರದೇಶಗಳಲ್ಲಿ ಆಯೋಜಿಸಲಾಗುವುದು. ಕಾರ್ಯಕ್ರಮಗಳ ವ್ಯವಸ್ಥಿತ ಆಯೋಜನೆಗೆ ಈಗಾಗಲೇ ಪೂರ್ವಸಿದ್ಧತೆ ಕೈಗೊಳ್ಳಲಾಗಿದೆ ಎಂದರು.

ಈ ಕುರಿತು ಕತ್ತಲಗೆರೆ ಮತ್ತು ನವುಲೆಯ ಸಂಶೋಧನಾ ಕೇಂದ್ರಗಳಲ್ಲಿ ರೈತರಿಗೆ ಪ್ರಾಯೋಗಿಕ ಮಾಹಿತಿ ನೀಡಲು ಕ್ರಮ ಕೈಗೊಳ್ಳಲಾಗುವುದು. ಇದರಿಂದಾಗಿ ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ನೀರಿನ ಕೊರತೆಯನ್ನು ಹೋಗಲಾಡಿಸಿ ಪರ್ಯಾಯ ಬೆಳೆಗಳನ್ನು ಬೆಳೆಯಬಹುದಾಗಿದೆ.

ವರ್ಷದಿಂದ ವರ್ಷಕ್ಕೆ ಜಲಾಶಯದಲ್ಲಿ ಕಡಿಮೆ ಪ್ರಮಾಣದಲ್ಲಿ ನೀರಿನ ಸಂಗ್ರಹವಾಗುತ್ತಿರುವುದು ರೈತರನ್ನು ಆತಂಕಕ್ಕೀಡು ಮಾಡುತ್ತಿದೆ. ಈ ವಿಷಯದ ಕುರಿತು ವಿಸ್ತೃತ ಚರ್ಚೆಗಳನ್ನು ರೈತರು ಮತ್ತು ಅಧಿಕಾರಿಗಳೊಂದಿಗೆ ನಡೆಸಲು ಇದು ಸಕಾಲವಾಗಿದೆ. ಇಲ್ಲಿ ನಡೆಯುವ ಅರ್ಥಪೂರ್ಣ ಚರ್ಚೆಗಳು ಅನುಷ್ಠಾನಕ್ಕೆ ಬರುವಂತಾಗಬೇಕು. ರೈತರಿಗೆ ಉಪಯುಕ್ತ ಮಾಹಿತಿ ನೀಡುವಂತಾಗಬೇಕು ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಕೃಷಿ ಸಮಾಜ, ಪ್ರಗತಿಪರ ರೈತರು, ನೀರು ಬಳಕೆದಾರರ ಸಂಘಗಳ ಪ್ರತಿನಿಧಿಗಳು ಮುಂತಾದವರನ್ನು ಆಹ್ವಾನಿಸಲಾಗುವುದು ಎಂದರು.

ಸಭೆಯಲ್ಲಿ ನಿವೃತ್ತ ಕೃಷಿ ನಿರ್ದೇಶಕ ಎಂ.ಮಲ್ಲಪ್ಪ, ಕಾಡಾ ಆಡಳಿತಾಧಿಕಾರಿ ಡಾ.ರಾಜಣ್ಣ, ಭೂ ಅಭಿವೃದ್ಧ್ದಿ ಅಧಿಕಾರಿ ಎಂ.ಎಸ್.ಬಸವಣ್ಣ, ಜಂಟಿ ಕೃಷಿ ನಿರ್ದೇಶಕರಾದ ಹಂಸವೇಣಿ ಮತ್ತು ಡಾ.ಮಧುಸೂದನ್, ಡಾ.ಟಿ.ಎಚ್.ಗೌಡ, ವೈ.ಧ್ಯಾವಪ್ಪರೆಡ್ಡಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News