ಸೆಪ್ಟಂಬರ್‌ವರೆಗೆ ಮರಳುಗಾರಿಕೆ ನಿರ್ಬಂಧ: ಜಿಲ್ಲಾಧಿಕಾರಿ ನಕುಲ್
ಕಾರವಾರ,ಆ.3: ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂ.1ರಿಂದ ಜು.31ರವರೆಗೆ ಮುಂಗಾರು ಅವಧಿಯಲ್ಲಿ ವಿಧಿಸಲಾಗಿದ್ದ ಮರಳುಗಾರಿಕೆ ನಿಷೇಧ ಇನ್ನೂ ಒಂದು ತಿಂಗಳ ಕಾಲ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದ್ದಾರೆ.
ಬುಧವಾರ ನಡೆದ ಜಿಲ್ಲಾ ಮರಳು ನೀತಿ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಯಿತು.
ಮೀನುಗಳು ಮೊಟ್ಟೆ ಇಡುವ ಹಾಗೂ ಮರಿ ಮಾಡುವ ಪ್ರಕ್ರಿಯೆ ಸೆಪ್ಟಂಬರ್‌ವರೆಗೂ ನಡೆಯುವ ಹಿನ್ನೆಲೆಯಲ್ಲಿ ಮರಳುಗಾರಿಕೆಗೆ ಅವಕಾಶ ನೀಡುವುದು ಸರಿಯಲ್ಲ ಎಂದು ಪರಿಸರ ತಜ್ಞರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಕರಾವಳಿಯಲ್ಲಿ ನದಿಗಳು ತುಂಬಿ ಹರಿಯುತ್ತಿರುವ ಕಾರಣ ಮರಳುಗಾರಿಕೆಗೆ ವಿಧಿಸಲಾಗಿದ್ದ ನಿರ್ಬಂಧವನ್ನು ಸೆಪ್ಟಂಬರ್‌ವರೆಗೆ ಮುಂದುವರಿಸಲಾಗುವುದು ಎಂದು ಅವರು ಹೇಳಿದರು.
ಅಕ್ರಮ ಮರಳು ಸಾಗಣೆಗೆ ತಡೆ: ಶರಾವತಿಯಲ್ಲಿ ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇದನ್ನು ತಡೆಯಲು ಉಪವಿಭಾಗಾಧಿಕಾರಿ ಅವರು ನಿರಂತರ ಸ್ಥಳ ಪರಿಶೀಲನೆ ನಡೆಸಬೇಕು. ಮರಳು ಅಕ್ರಮವಾಗಿ ಸಾಗಾಟವಾಗದಂತೆ ತಡೆಯಲು ಎಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಅಕ್ರಮ ಮರಳುಗಾರಿಕೆಯಲ್ಲಿ ತೊಡಗುವ ಬೋಟ್‌ಗಳನ್ನು ಜಪ್ತಿ ಮಾಡಿ ಕಾನೂನು ಕ್ರಮ ಜರಗಿಸಬೇಕು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿರುವ ಎಲ್ಲಾ ಚೆಕ್‌ಪೋಸ್ಟ್‌ಗಳನ್ನು ಬಲಪಡಿಸಬೇಕು. ಕಂದಾಯ, ಪೊಲೀಸ್, ಆರ್‌ಟಿಒ, ಗಣಿ ಮತ್ತು ಭೂವಿಜ್ಞಾನ, ಅರಣ್ಯ, ಪಂಚಾಯತ್ ಸೇರಿದಂತೆ ಸಂಬಂಧಿಸಿದ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಕರ್ತವ್ಯ ಲೋಪ ಎಸಗಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಜಪ್ತಿ ಮಾಡಲಾಗಿರುವ ಮರಳನ್ನು ಸರಕಾರಿ ಇಲಾಖೆಗಳಿಗೆ ಆದ್ಯತೆ ಮೇರೆಗೆ ನೀಡುವಂತೆ ಅವರು ಸೂಚಿಸಿದರು.
ಜಿಪಿಎಸ್ ಅಳವಡಿಸಿದ ಲಾರಿಗಳಲ್ಲಿ ಮಾತ್ರ ಮರಳು ಸಾಗಣೆಗೆ ಅವಕಾಶ ಕಲ್ಪಿಸಲಾಗಿದೆ. ಇದೇ ರೀತಿ ಮರಳು ತೆಗೆಯಲು ಬಳಸುವ ಬೋಟ್‌ಗಳಿಗೆ ಜಿಪಿಎಸ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಪ್ರಥಮ ಹಂತದಲ್ಲಿ 10ಬೋಟ್‌ಗಳಿಗೆ ಪ್ರಾಯೋಗಿಕವಾಗಿ ಜಿಪಿಎಸ್ ಅಳವಡಿಕೆ ಮಾಡಿ ಫಲಿತಾಂಶ ಪರಿಶೀಲಿಸಲಾಗುವುದು. ಜಿಪಿಎಸ್ ಅಳವಡಿಸಿದ ಲಾರಿಗಳ ಚಲನೆ ಮೇಲೆ ನಿಗಾ ಇರಿಸಲು ಪೊಲೀಸ್ ಕಂಟ್ರೋಲ್ ರೂಂನಲ್ಲಿ ತಾಂತ್ರಿಕ ವ್ಯವಸ್ಥೆಯನ್ನು ಕಲ್ಪಿಸಬೇಕು. ಜಿಪಿಎಸ್ ಪರಿಶೀಲನೆಗೆ ಸಂಬಂಧಪಟ್ಟ ಇಲಾಖೆಗಳಿಗೆ ಲಾಗಿನ್ ಒದಗಿಸಬೇಕು. ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ (ಪ್ರಭಾರಿ) ಮುಹಮ್ಮದ್ ನಸ್ರುಲ್ಲಾ, ಅಡಿಷನಲ್ ಎಸ್ಪಿ ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.