×
Ad

ರಾಜ್ಯದ ಸಂಸದರ ವಿರುದ್ಧ ಆಪ್ ಮೌನ ಧರಣಿ

Update: 2016-08-03 22:19 IST

ಶಿವಮೊಗ್ಗ,ಆ.3: ಮಹಾದಾಯಿ ನದಿ ನೀರಿನ ವಿಚಾರದಲ್ಲಿ ರಾಜ್ಯದ ಸಂಸದರು ಪ್ರಧಾನಮಂತ್ರಿಯೊಂದಿಗೆ ಚರ್ಚೆ ನಡೆಸಬೇಕು. ಒಂದು ವಾರದೊಳಗೆ ಸಮಸ್ಯೆ ಇತ್ಯರ್ಥ ಪಡಿಸಬೇಕೆಂದು ಆಗ್ರಹಿಸಿ, ಆಪ್ ಪಕ್ಷದ ಕಾರ್ಯಕರ್ತರು ಬುಧವಾರ ನಗರದ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಮೌನ ಧರಣಿ ನಡೆಸಿದರು. ತದನಂತರ ಸಂಸದ ಬಿ.ಎಸ್. ಯಡಿಯೂರಪ್ಪರವರ ಕಚೇರಿಗೆ ತೆರಳಿ ಮನವಿ ಪತ್ರ ಅರ್ಪಿಸಿದರು. ಮಹಾದಾಯಿ ಕುಡಿಯುವ ನೀರು ಯೋಜನೆಯು ಉತ್ತರ ಕರ್ನಾಟಕ ಭಾಗದ ಬಹುದಿನದ ಬೇಡಿಕೆಯಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆ ಹಲವು ದಶಕಗಳಿಂದ ಆ ಭಾಗದ ಜನರು ಹೋರಾಟ ನಡೆಸುತ್ತಿದ್ದಾರೆ. ಆದರೆ, ಕರ್ನಾಟಕ ರಾಜ್ಯದ ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಈ ಯೋಜನೆ ಕೈತಪ್ಪುವ ಹಂತದಲ್ಲಿದೆ ಎಂದು ಸಂಘಟನೆ ಆರೋಪಿಸಿದೆ. ಈ ಯೋಜನೆಯ ವಿವಾದ ಬಗೆಹರಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಧ್ಯಸ್ಥಿಕೆ ವಹಿಸಬೇಕು. ಈ ಬಗ್ಗೆ ರಾಜ್ಯದ ಎಲ್ಲ 28 ಲೋಕಸಭಾ ಸದಸ್ಯರು ಪ್ರಧಾನಮಂತ್ರಿಗಳನ್ನು ಭೇಟಿಯಾಗಿ ಸಮಾಲೋಚನೆ ನಡೆಸಬೇಕು. ಉತ್ತರ ಕರ್ನಾಟಕದ ಜನತೆ ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ತಿಳಿ ಹೇಳಬೇಕು. ಅವರ ಮನವೊಲಿಸಿ ಯೋಜನೆಯ ಅನುಷ್ಠಾನಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು. ಈ ಮೂಲಕ ಕರ್ನಾಟಕ ಹಾಗೂ ಗೋವಾ ಮುಖ್ಯಮಂತ್ರಿ ಮಧ್ಯೆ ಮಾತುಕತೆ ನಡೆದು ವಿವಾದ ಇತ್ಯರ್ಥಕ್ಕೆ ಪ್ರಯತ್ನಿಸುವ ನಿಟ್ಟಿನಲ್ಲಿ ಸಂಸದರು ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಮಹಾದಾಯಿ ವಿಚಾರದಲ್ಲಿ ರಾಜ್ಯದ ಎಲ್ಲ ಸಂಸದರು ಪಕ್ಷ-ಭೇದ ಮರೆತು ಹೋರಾಟ ನಡೆಸಬೇಕು ಎಂದು ಪಕ್ಷ ಸಂಸದರಿಗೆ ಒತ್ತಾಯಿಸಿದೆ. ರಾಜ್ಯದ ಸಂಸದರು ಯೋಜನೆ ಅನುಷ್ಠಾನಗೊಳಿಸುವಲ್ಲಿ ಏನಾದರೂ ವಿಫಲವಾದರೆ ಅವರ ವಿರುದ್ಧ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಸಂಚಾಲಕ ಸುರೇಶ್ ವಾಟಗೋಡು, ದೇವರಾಜ್, ಕೆ. ಗಂಗಾಧರ್, ವಿದ್ಯಾಧರ್ ಭಟ್, ಅರುಣ್‌ಕುಮಾರ್, ಚನ್ನಪ್ಪಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News