ಕ್ಲಿನಿಕಲ್ ಟ್ರಯಲ್ ಮೇಲಿನ ನಿರ್ಬಂಧ ಸಡಿಲಗೊಳಿಸಿದ ಸರಕಾರ

Update: 2016-08-04 04:14 GMT

ಹೊಸದಿಲ್ಲಿ, ಆ.4: ಹೊಸ ಔಷಧಿಗಳ ಸಂಶೋಧನೆಗೆ ಸಂಬಂಧಿಸಿದ ನಿರ್ಬಂಧಗಳನ್ನು ಕೇಂದ್ರ ಸರಕಾರ ಸಡಿಲಿಸಿದ್ದು, ಇದರಿಂದ ಕ್ಲಿನಿಕಲ್ ಟ್ರಯಲ್ ಹೆಚ್ಚುವ ಸಾಧ್ಯತೆ ಇದೆ. ಆದರೆ ಇದರೊಂದಿಗೆ ರೋಗಿಯ ಸುರಕ್ಷತೆ ಕುರಿತೂ ಆತಂಕ ಎದುರಾಗಿದೆ.

ಭಾರತದ ಡ್ರಗ್ ಕಂಟ್ರೋಲರ್ ಜನರಲ್ ಈ ಸಂಬಂಧ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದ್ದಾರೆ. ಸಂಹಿತೆ ಸಮಿತಿ ಮಾನ್ಯ ಮಾಡಿದಷ್ಟು ಕ್ಲಿನಿಕಲ್ ಟ್ರಯಲ್‌ಗಳನ್ನು ನಡೆಸಲು ಸಂಶೋಧಕರಿಗೆ ಅವಕಾಶವಿದೆ ಎಂದು ಅಧಿಸೂಚನೆ ಹೇಳುತ್ತದೆ. ಇದೀಗ ಗರಿಷ್ಠ ಮೂರು ಕ್ಲಿನಿಕಲ್ ಟ್ರಯಲ್ ನಡೆಸಲು ಮಾತ್ರ ಅವಕಾಶವಿದೆ. ಅಂಥ ಕ್ಲಿನಿಕಲ್ ಟ್ರಯಲ್ ನಡೆಸುವ ಆಸ್ಪತ್ರೆಗಳ ಬಗೆಗಿನ ನಿರ್ಬಂಧವನ್ನೂ ಸಡಿಲಿಸಲಾಗಿದೆ. 50 ಹಾಸಿಗೆಗಳ ಆಸ್ಪತ್ರೆಗಿಂತ ಕಡಿಮೆ ಸಾಮರ್ಥ್ಯದ ಆಸ್ಪತ್ರೆಗಳಲ್ಲಿ ಕ್ಲಿನಿಕಲ್ ಟ್ರಯಲ್ ನಡೆಸುವಂತಿಲ್ಲ ಎಂದು ಈ ಹಿಂದೆ ಇದ್ದ ನಿಯಮಾವಳಿಯನ್ನೂ ಸಡಿಲಿಸಲಾಗಿದೆ.

ಹೊಸ ನಿಯಮಾವಳಿಯ ಅನ್ವಯ ಸಂಹಿತೆ ಸಮಿತಿಯು, ಕ್ಲಿನಿಕಲ್ ಟ್ರಯಲ್ ನಡೆಸಲು ಯೋಗ್ಯ ಎಂದು ನಿರ್ಧರಿಸುವ ಆಸ್ಪತ್ರೆಗಳಲ್ಲಿ ಇಂಥ ಟ್ರಯಲ್ ನಡೆಸಬಹುದು ಎಂದು ಸ್ಪಷ್ಟಪಡಿಸಲಾಗಿದೆ. ಆದರೆ ತುರ್ತು ನಿಗಾ ವ್ಯವಸ್ಥೆ ಇರುವುದು ಕಡ್ಡಾಯ ಎಂದು ಹೇಳಿದೆ.

ಹೀಗೆ ಕ್ಲಿನಿಕಲ್ ಟ್ರಯಲ್ ಮಾಡಿದ ಹಿನ್ನೆಲೆಯಲ್ಲಿ ಸಾವುಗಳು ಹೆಚ್ಚಿದ್ದರಿಂದ ಸರಕಾರ ಹಿಂದೆ ನಿರ್ಬಂಧಗಳನ್ನು ವಿಧಿಸಿತ್ತು. 2008ರಲ್ಲಿ 65 ಕ್ಲಿನಿಕಲ್ ಟ್ರಯಲ್ಸ್ ನಡೆದಿದ್ದರೆ, 2010ರಲ್ಲಿ ಇದು 500ಕ್ಕೆ ಹೆಚ್ಚಿತ್ತು. ಆದರೆ ಸುಪ್ರೀಂಕೋರ್ಟ್ ಮಧ್ಯಪ್ರವೇಶದಿಂದಾಗಿ ಈ ಸಂಖ್ಯೆ 2011ರ ಬಳಿಕ ಇಳಿಕೆಯಾಗಿದೆ. ಇದೀಗ ಕ್ಲಿನಿಕಲ್ ಟ್ರಯಲ್ ನಿಯಮಾವಳಿ ಸಡಿಲಿಸಿರುವುದರಿಂದ ರೋಗಿಗಳ ಸುರಕ್ಷತೆ ಬಗ್ಗೆ ಆತಂಕ ಎದುರಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News