ಜಿಎಸ್‌ಟಿಗೆ ವಿರೋಧವಿಲ್ಲ: ಸಿದ್ದರಾಮಯ್ಯ
ಬೆಂಗಳೂರು, ಆ.4: ಒಂದು ದೇಶ ಒಂದೇ ತೆರಿಗೆ ಎಂಬ ಉದ್ದೇಶ ಹೊಂದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಟಿ) ನಮ್ಮ ಕೂಸು. ಕೇಂದ್ರದಲ್ಲಿ ಯುಪಿಎ ಸರಕಾರ ಇದ್ದಾಗ ಅದನ್ನು ರೂಪಿಸಲಾಗಿತ್ತು. ಹೀಗಾಗಿ ಜಿಎಸ್‌ಟಿಗೆ ವಿರೋಧವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.ಆದರೆ, ತೆರಿಗೆ ದರ ಶೇ.18 ಮೀರಬಾರದು ಎಂಬುದೇ ನಮ್ಮ ನಿಲುವು ಎಂದು ಅವರು ಹೇಳಿದ್ದಾರೆ.
ಜಿಎಟಿ 150 ದೇಶಗಳಲ್ಲಿ ಜಾರಿಯಲ್ಲಿದೆ. ತೆರಿಗೆ ದರ ಬೇರೆ ಬೇರೆ ದೇಶಗಳಲ್ಲಿ ಶೇ.14ರಿಂದ ಶೇ.16ರ ವರೆಗೆ ಇದೆ. ನಮ್ಮಲ್ಲಿ ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಇರಬೇಕು ಎಂಬುದು ನಮ್ಮ ನಿಲುವು. ನಮ್ಮ ಪಕ್ಷ ಎಂದಿಗೂ ಜಿಎಸ್‌ಟಿಗೆ ವಿರುದ್ಧವಾಗಿ ಇರಲಿಲ್ಲ. ವಿರೋಧ ಮಾಡುತ್ತಿದ್ದವರು ಬಿಜೆಪಿಯವರು. ಈ ಕಾರಣಕ್ಕಾಗಿಯೇ ವಿಧೇಯಕ ಮಂಡನೆಯಲ್ಲಿ ವಿಳಂಬವಾಗಿತ್ತು ಎಂದು ತಿಳಿಸಿದರು.
ಒಂದು ದೇಶ ಒಂದೇ ತೆರಿಗೆ ಎಂಬ ಉದ್ದೇಶದಿಂದಲೇ ಯುಪಿಎ ಸರಕಾರ ವಿಧೇಯಕ ತಯಾರಿಸಿತ್ತು. ಇದರಿಂದ ತೆರಿಗೆ ಕಾಯ್ದೆಯಲ್ಲಿ ಪಾರದರ್ಶಕತೆಯೂ ಇರಲಿದೆ ಎಂದರು.