ಪಡಿತರ ವ್ಯವಸ್ಥೆ ಸರಿಪಡಿಸಲು ಆಗ್ರಹಿಸಿ ಮನವಿ
ಹೊನ್ನಾವರ, ಆ.4: ಬಿಪಿಎಲ್ ಕಾರ್ಡ್‌ದಾರರು ಬೆರಳಚ್ಚು ನೀಡಿ ಪಡಿತರ ಚೀಟಿ ಪಡೆಯುವ ವ್ಯವಸ್ಥೆ ಅವ್ಯವಸ್ಥೆಯಿಂದ ಕೂಡಿದ್ದು, ಸೀಮೆ ಎಣ್ಣೆ ಪಡೆಯಲು ಬೇರೆಕಡೆ ಇರುವ ಆನ್‌ಲೈನ್ ನೋಂದಣಿ ಕೇಂದ್ರಕ್ಕೆ ತೆರಳಿ ಬೆರಳಚ್ಚು ನೀಡಿ(ಚೀಟಿ) ಟೋಕನ್ ಪಡೆಯಬೇಕಾಗುತ್ತಿದೆ. ರೋಗಿಗಳಿಗೆ ಅಂಗವಿಕಲರಿಗೆ ಇದು ಬಹಳ ಕಷ್ಟವಾಗಿರುತ್ತದೆ.
ಸೀಮೆಎಣ್ಣೆಗೆ ಪಡಿತರ ಅಂಗಡಿಗೆ ಬರುವವರು ಪ್ರತಿ ತಿಂಗಳ ನಿಗದಿತ ಸಮಯದಲ್ಲಿ ಟೋಕನ್ ಹೊಂದಿಸುವುದು ಕಷ್ಟಕರ ಕೆಲಸ ಆಗಿದೆ. ಆದ್ದರಿಂದ ಈ ಹೊಸ ವ್ಯವಸ್ಥೆಯನ್ನು ರದ್ದುಪಡಿಸಿ, ಮೊದಲಿನಂತೆ ಪಡಿತರ ಅಂಗಡಿಯಲ್ಲಿಯೇ ಎಲ್ಲ ವಸ್ತುಗಳನ್ನು ಒದಗಿಸಬೇಕೆಂದು ಕರವೇ ತಾಲೂಕು ಘಟಕ ತಹಶೀಲ್ದಾರ್ ಮುಖಾಂತರ ಆಹಾರ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
ಸಾರ್ವಜನಿಕರು ಪಡಿತರ ಚೀಟಿಗೆ ದಿನಸಿಗಳನ್ನು ಪಡೆಯಲು ಸಾಲುಗಟ್ಟಿ ನಿಲ್ಲಬೇಕಾಗಿದೆ. ಟೋಕನ್ ಪದ್ಧತಿಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ಈ ಬಗ್ಗೆ ಸಂಘಟನೆಯ ಜಿಲ್ಲಾಧ್ಯಕ್ಷ ದಿಲೀಪ್ ಅರ್ಗೇಕರ್, ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದು ರಾಜ್ಯ ಸರಕಾರ ಪಡಿತರ ಚೀಟಿಗೆ ನೀಡುವ ದಿನಸಿ, ಕಾಟಾಚಾರಕ್ಕೆ ನೀಡುತ್ತಿದ್ದು ಸರಕಾರ ತಿಂಗಳಿಗೊಮ್ಮೆ ಅನುಸರಿಸುತ್ತಿರುವ ನಿಯಮದಿಂದಾಗಿ ಜನರು ಗೊಂದಲಕ್ಕೀಡಾಗಿದ್ದಾರೆ ಎಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ. ಮನವಿ ಸಲ್ಲಿಸುವ ನಿಯೋಗದಲ್ಲಿ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಸುಭಾಷ್ ಗುನಗಿ, ಕಾರ್ಯದರ್ಶಿ ಗೋಪಾಲ್ ಗೌಡ, ನಿಲೇಶ್, ಸಮೀರ್ ಶೇಜವಾಡಕರ್, ಸಂದೇಶ ಆಚಾರಿ ಹಾಗೂ ಮತ್ತಿತರರು ಹಾಜರಿದ್ದರು.