ಜಿಪಂ ಅಧ್ಯಕ್ಷರ ಸೌಲಭ್ಯಗಳಿಗೆ ಕತ್ತರಿ ಪ್ರಯೋಗ
ಶಿವಮೊಗ್ಗ, ಆ. 4: ರಾಜ್ಯದ ಎಲ್ಲ ಜಿಪಂ ಅಧ್ಯಕ್ಷರಿಗೆ ರಾಜ್ಯ ಸಚಿವರ ಸ್ಥಾನಮಾನ ಕಲ್ಪಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಆದರೆ ರಾಜ್ಯ ಸಚಿವ ಸ್ಥಾನಮಾನ ಹೊಂದಿರುವವರಿಗೆ ಲಭ್ಯವಾಗುವ ಸೌಲಭ್ಯಗಳಲ್ಲಿ ಕೆಲವೊಂದನ್ನು ಮಾತ್ರ ಜಿಪಂ ಅಧ್ಯಕ್ಷರಿಗೆ ಕಲ್ಪಿಸಲಾಗಿದೆ. ಉಳಿದಂತೆ ಹಲವು ಸೌಲಭ್ಯಗಳಿಗೆ ಕತ್ತರಿ ಪ್ರಯೋಗ ಮಾಡಲಾಗಿದೆ. ಇದು ಹಲವು ಜಿಪಂ ಅಧ್ಯಕ್ಷರಲ್ಲಿ ಅಸಮಾಧಾನ ಉಂಟು ಮಾಡಿದೆ. ಸರಕಾರ ಹೊರಡಿಸಿರುವ ಆದೇಶದಲ್ಲಿ ಜಿಪಂ ಅಧ್ಯಕ್ಷರು ಪ್ರಯಾಣಿಸುವ ಸರಕಾರಿ ಕಾರಿನ ಮೇಲೆ ಕೆಂಪು ದೀಪ ಅಳವಡಿಕೆಗೆ ಅವಕಾಶ ಕಲ್ಪಿಸಿಲ್ಲ. ಹಾಗೆಯೇ ಅಧ್ಯಕ್ಷರ ಕೋಟಾದಡಿ ನಯಾಪೈಸೆ ವಿವೇಚನಾ ನಿಧಿಯೂ ಇಲ್ಲವಾಗಿದೆ. ಹಾಗೆಯೇ ಪ್ರಸ್ತುತ ನಿಗದಿಪಡಿಸಿರುವ ಮಾಸಿಕ ಇಂಧನ ಕೋಟಾವು ಅತ್ಯಲ್ಪವಾಗಿದೆ ಎಂದು ಕೆಲ ಜಿಪಂ ಅಧ್ಯಕ್ಷರ ಆರೋಪವಾಗಿದೆ. ಜಿಪಂ ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನಮಾನ ಕಲ್ಪಿಸಲಾಗಿದೆ. ವೇತನ-ಭತ್ತೆಗಳ ಪರಿಷ್ಕರಣೆ ಮಾಡಲಾಗಿದೆ. ಆಪ್ತ ಸಿಬ್ಬಂದಿಯ ನಿಯೋಜನೆಯಲ್ಲಿಯೂ ಮಾರ್ಪಾಡು ತಂದಿದೆ. ಆದರೆ ರಾಜ್ಯ ಸಚಿವರಿಗೆ ಸರಿಸಮಾನವಾಗಿ ಸೌಲಭ್ಯ ಕಲ್ಪಿಸಿಲ್ಲ. ಹಲವು ಸೌಲಭ್ಯಗಳಿಗೆ ಕತ್ತರಿ ಹಾಕಲಾಗಿದೆ. ಪ್ರಸ್ತುತ ನೀಡಲಾಗಿರುವ ಕೆಲ ರಿಯಾಯ್ತಿಗಳಿಗೆ ಮಿತಿ ಹಾಕಲಾಗಿರುವುದು ಸರಿಯಲ್ಲ. ರಾಜ್ಯ ಸಚಿವ ಸ್ಥಾನಮಾನ ಕಲ್ಪಿಸಿದ ಮೇಲೆ ಆ ವರ್ಗದ ಸಚಿವರಿಗೆ ಸಿಗುವ ಎಲ್ಲ ಸೌಲಭ್ಯ, ಆಡಳಿತಾತ್ಮಕ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಜಿಪಂ ಅಧ್ಯಕ್ಷರಿಗೂ ಕಲ್ಪಿಸಬೇಕು. ಆದರೆ ಈ ವಿಷಯದಲ್ಲಿ ಕೆಲ ತಾರತಮ್ಯ ಮಾಡಲಾಗಿದೆ. ಇದು ಸರಿಯಲ್ಲ ಎನ್ನುವುದು ತಮ್ಮ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಜಿಪಂ ಅಧ್ಯಕ್ಷರೊಬ್ಬರು ಹೇಳುತ್ತಾರೆ. ವೇತನ-ಭತ್ತೆಯಲ್ಲಿ ಹೆಚ್ಚಳ...
1956 ರ ಕರ್ನಾಟಕ ಸಚಿವರ ವೇತನ ಮತ್ತು ಭತ್ತೆ ಅಧಿನಿಯಮ ಹಾಗೂ ಸಂಬಂಧಪಟ್ಟ ನಿಯಾಮಾವಳಿಯನ್ವಯ ರಾಜ್ಯ ಸಚಿವರಿಗೆ ನೀಡುವ ವೇತನ, ತ್ತೆ ಇತ್ಯಾದಿ ಸೌಲಭ್ಯಗಳನ್ನು ರಾಜ್ಯದ ಎಲ್ಲ ಜಿಪಂ ಅಧ್ಯಕ್ಷರಿಗೆ ಕಲ್ಪಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಇದಕ್ಕಾಗಿ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.
ಅದರಂತೆ ಅಧ್ಯಕ್ಷರು ಬಾಡಿಗೆ ಮನೆಗೆ ಪ್ರತೀ ತಿಂಗಳು ಗರಿಷ್ಠ 15 ರಿಂದ 20 ಸಾವಿರ ಭತ್ತೆ ಪಡೆಯಲು ಅರ್ಹತೆ ಹೊಂದಿದ್ದಾರೆ. ಹೊಸದಾದ ವಾಹನ ಖರೀದಿಗೆ ಅವಕಾಶ, ಪ್ರತೀ ತಿಂಗಳು 550 ಲೀಟರ್ ಸಮಾನವಾದ ಇಂಧನ ಭತ್ತೆ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಓರ್ವ ಆಪ್ತ ಕಾರ್ಯದರ್ಶಿ, ತಲಾ ಇಬ್ಬರು ಸಿ, ಡಿ ವೃಂದದ ಸಿಬ್ಬಂದಿ ಹಾಗೂ ಓರ್ವ ವಾಹನ ಚಾಲಕ ಪಡೆದುಕೊಳ್ಳಬಹುದಾಗಿದೆ. ಬಾಡಿಗೆ ಅಥವಾ ಸ್ವಂತ ನಿವಾಸದಲ್ಲಿ ದೂರವಾಣಿ ಸಂಪರ್ಕ ಪಡೆಯಬಹುದಾಗಿದೆ. ಪ್ರವಾಸ ಭತ್ತೆಯ ಅವಕಾಶ ಕಲ್ಪಿಸಲಾಗಿದೆ.