×
Ad

ಆರೋಗ್ಯ ಇಲಾಖೆಯ ಸೂಚನೆ ಪಾಲಿಸಿ: ಗಣಾಧೀಶ್

Update: 2016-08-04 22:33 IST

ಸಾಗರ, ಆ.4: ಮಲೇರಿಯಾ ಮತ್ತು ಡೆಂಗ್‌ನಂತಹ ಮಾರಕ ಕಾಯಿಲೆಗಳು ಮಳೆಗಾಲದಲ್ಲಿ ಹರಡುತ್ತವೆೆ. ಕಾಯಿಲೆ ನಿಯಂತ್ರಣ ಹಾಗೂ ಜನಜಾಗೃತಿಗಾಗಿ ನಗರಸಭೆ ವತಿಯಿಂದ ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ನಗರಸಭೆ ಅಧ್ಯಕ್ಷ ಆರ್.ಗಣಾಧೀಶ್ ತಿಳಿಸಿದ್ದಾರೆ.

ಇಲ್ಲಿನ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಗುರುವಾರ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ, ನಗರಸಭೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ, ತಾಲೂಕು ಆರೋಗ್ಯಾಧಿಕಾರಿಗಳ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಲೇರಿಯಾ ನಿಯಂತ್ರಣ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾರ್ವಜನಿಕರು ಆರೋಗ್ಯದ ಬಗ್ಗೆ ಮುಂಜಾಗೃತೆ ವಹಿಸಬೇಕು. ನಗರಸಭೆ ಹಾಗೂ ಆರೋಗ್ಯ ಇಲಾಖೆ ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜೀವಕ್ಕೆ ಸಂಚಕಾರವನ್ನು ತರುವ ಡೆಂಗ್, ಮಲೇರಿಯಾ ಕಾಯಿಲೆ ಕುರಿತು ಕರಪತ್ರದಲ್ಲಿ ಇರುವ ಮಾಹಿತಿಗಳನ್ನು ಓದಿ, ಅರ್ಥೈಸಿಕೊಳ್ಳುವ ಜೊತೆಗೆ ನಿಮ್ಮ ಭಾಗದಲ್ಲಿ ಅದರ ಕುರಿತು ಮಾಹಿತಿ ನೀಡುವಂತೆ ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ಕೆ.ಪಿ.ಅಚ್ಚುತ್, ರಾಜ್ಯದಲ್ಲಿ ಡೆಂಗ್‌ಗೆ ಸಂಬಂಧಪಟ್ಟಂತೆ 11ಸಾವಿರ ಪ್ರಕರಣ ದಾಖಲಾಗಿವೆೆ. ಸಾಗರ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಜನವರಿಯಿಂದ ಈತನಕ 17 ಪ್ರಕರಣಗಳು ದಾಖಲಾಗಿದ್ದು, ನಗರಸಭೆ ವ್ಯಾಪ್ತಿಯ 21, 22 ಹಾಗೂ 23ನೆ ವಾರ್ಡ್‌ನಲ್ಲಿ ಹೊಸದಾಗಿ 5 ಡೆಂಗ್ ಶಂಕಿತ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದರು. ನಗರಸಭೆ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕರಪತ್ರದ ಮೂಲಕ ಇಂದಿನಿಂದ 5ದಿನಗಳ ಕಾಲ ನಗರ ಹಾಗೂ ಗ್ರಾಮಾಂತರ ಪ್ರದೇಶದ ಮನೆಮನೆಗೆ ಜಾಗೃತಿ ಮೂಡಿಸಲಾಗುತ್ತದೆ. ನಗರವ್ಯಾಪ್ತಿಯಲ್ಲಿ ಕಸ ಸಂಗ್ರಹಣೆಗೆ ತೆರಳುವ ವಾಹನಗಳಲ್ಲಿ ಧ್ವನಿಸುರಳಿ ಮೂಲಕ ಸಹ ಜಾಗೃತಿ ಮೂಡಿಸಲಾಗುತ್ತದೆ ಎಂದರು. ವೇದಿಕೆಯಲ್ಲಿ ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕರಾದ ಗುರುಪ್ರಸಾದ್, ಶೈಲೇಶ್, ಆರೋಗ್ಯ ಇಲಾಖೆಯ ಸುಮ, ಭಾರತಿ, ಸುವರ್ಣ ಬಿ.ಟಿ., ಸುರೇಶ್ ಎ., ಯಶೋಧ, ಶಕುಂತಲಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News