×
Ad

ರಿಯೋ ಒಲಿಂಪಿಕ್ಸ್‌ಗೆ ಕೊಡಗಿನ ಕ್ರೀಡಾಪಟುಗಳು

Update: 2016-08-04 22:37 IST

  ಮಡಿಕೇರಿ, ಆ.4: ಆ.5ರಿಂದ 21ರವರೆಗೆ ನಡೆಯಲಿರುವ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತದಿಂದ 114 ಕ್ರೀಡಾಪಟುಗಳು ಭಾಗವಹಿಸಲಿದ್ದು, ಕೊಡಗಿನಿಂದ 4 ಹಾಕಿ ಪಟುಗಳು ಸೇರಿದಂತೆ ಒಟ್ಟು 7 ಮಂದಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ಕೊಡಗಿನ ಹಾಕಿ ಪಟುಗಳಾದ ಎಸ್.ವಿ. ಸುನಿಲ್, ವಿ.ಆರ್. ರಘುನಾಥ್, ಎಸ್.ಕೆ. ಉತ್ತಪ್ಪ, ನಿಖಿನ್ ತಿಮ್ಮಯ್ಯ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದು, ಭಾರತೀಯ ಟೆನ್ನಿಸ್ ರಂಗದಲ್ಲಿ ಗಮನ ಸೆಳೆದಿರುವ ಆಟಗಾರ ಕೊಡಗಿನ ರೋಹನ್ ಬೋಪಣ್ಣ, ಬ್ಯಾಡ್ಮಿಂಟನ್ ತಾರೆ ಅಶ್ವಿನಿ ಪೊನ್ನಪ್ಪ, ಓಟಗಾರ್ತಿ ಪೂವಮ್ಮ(ಅಥ್ಲೆಟಿಕ್ಸ್ -ರಿಲೇ) ಈ ಬಾರಿಯ ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಪಡೆಯುವ ಹುಮ್ಮಸ್ಸಿನಲ್ಲಿದ್ದಾರೆ.

ಒಲಿಂಪಿಕ್ಸ್ ಇತಿಹಾಸದಲ್ಲಿ ಈವರೆಗೆ ಕೊಡಗಿನ ಸುಮಾರು 16 ಕ್ರೀಡಾಪಟುಗಳು ವಿವಿಧ ವಿಭಾಗಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ರೋಹನ್, ಅಶ್ವಿನಿ ಹಾಗೂ ಪೂವಮ್ಮರಿಗೆ ಇದು ಎರಡನೆ ಒಲಿಂಪಿಕ್ಸ್ ಆಗಿದ್ದು, ನಿಖಿನ್ ತಿಮ್ಮಯ್ಯ ಹೊಸ ಸೇರ್ಪಡೆಯಾಗಿದ್ದಾರೆ.

ರಾಷ್ಟ್ರಕ್ಕೆ ಅಸಂಖ್ಯಾತ ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಿರುವ ರಾಜ್ಯದ ಅತ್ಯಂತ ಪುಟ್ಟ ಜಿಲ್ಲೆ ಕೊಡಗು 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ವಿಶೇಷ ಗಮನ ಸೆಳೆದಿದೆ. ದೇಶೀಯ ಕ್ರೀಡೆಯಾದ ಹಾಕಿಗೆ ಕೊಡಗಿನಲ್ಲಿ ಹೆಚ್ಚು ಮಹತ್ವವಿದ್ದು, ತಂಡದ ಸದಸ್ಯರ ಪೈಕಿ ಕೊಡಗಿನ ಹಾಕಿ ಪಟುಗಳು ಪಾರುಪತ್ಯ ಮೆರೆದಿದ್ದಾರೆ. ತಂಡದ ಒಟ್ಟು ಆಟಗಾರರಲ್ಲಿ 4 ಮಂದಿ ಕೊಡಗಿನವರಾಗಿರುವುದು ಹೆಮ್ಮೆಯ ವಿಷಯವಾಗಿದೆ.

ಮತ್ತೊಂದು ವಿಶೇಷವೆಂದರೆ, ತಂಡದ ಉಪನಾಯಕನಾಗಿ ಜಿಲ್ಲೆಯ ಎಸ್.ವಿ. ಸುನಿಲ್ ಆಯ್ಕೆಯಾಗಿದ್ದಾರೆ. ವಿ.ಆರ್. ರಘುನಾಥ್, ಎಸ್.ಕೆ. ಉತ್ತಪ್ಪ ಹಾಗೂ ಚೇಂದಂಡ ನಿಖಿನ್ ತಿಮ್ಮಯ್ಯ ತಂಡದಲ್ಲಿದ್ದಾರೆ. ಸುನಿಲ್, ರಘುನಾಥ್ ಹಾಗೂ ಉತ್ತಪ್ಪರಿಗೆ ಇದು ಎರಡನೆ ಒಲಿಂಪಿಕ್ಸ್ ಆಗಿದ್ದರೆ, ನಿಖಿನ್ ತಿಮ್ಮಯ್ಯ ಪ್ರಥಮ ಬಾರಿ ಪ್ರವೇಶ ಪಡೆದಿದ್ದಾರೆ. ರಿಯೋ ಒಲಿಂಪಿಕ್ಸ್‌ನಲ್ಲಿ ನಾಲ್ವರು ಪ್ರತಿನಿಧಿಸುವುದರೊಂದಿಗೆ ಹಾಕಿ ಇತಿಹಾಸದಲ್ಲಿ ಕೊಡಗಿನ 10 ಆಟಗಾರರು ಈ ವರೆಗೆ ದೇಶವನ್ನು ಪ್ರತಿನಿಧಿಸಿದಂತಾಗಿದೆ. ಸಿಯೋಲ್ ಒಲಿಂಪಿಕ್ಸ್ ಹಾಗೂ 1992 ರ ಬಾರ್ಸಿಲೋನಾದಲ್ಲಿ ನಡೆದ ಒಲಿಂಪಿಕ್ಸ್‌ನ ತಂಡದಲ್ಲಿ ಕೊಡಗಿನ ತಲಾ ಇಬ್ಬರು ಆಟಗಾರರಿದ್ದರು. 1988 ರಲ್ಲಿ ಎಂ.ಎಂ. ಸೋಮಯ್ಯ ಹಾಗೂ ಬಿ.ಕೆ. ಸುಬ್ರಮಣಿ ಹಾಗೂ 1992ರಲ್ಲಿ ಅಂಜಪರವಂಡ ಸುಬ್ಬಯ್ಯ, ಸಿ.ಎಸ್. ಪೂಣಚ್ಚ ಭಾರತ ತಂಡದಲ್ಲಿದ್ದರು. 2012ರಲ್ಲಿ ಲಂಡನ್ ಒಲಿಂಪಿಕ್ಸ್‌ನಲ್ಲಿ ಎಸ್.ವಿ. ಸುನಿಲ್, ರಘುನಾಥ್ ಹಾಗೂ ಎಸ್.ಕೆ. ಉತ್ತಪ್ಪ ತಂಡದಲ್ಲಿದ್ದರು. ಆದರೆ, ಈ ಬಾರಿ ಕೊಡಗಿನ ನಾಲ್ವರು ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News