ಬೆಲೆ ಏರಿಕೆ ತಡೆಗೆ ಕೇಂದ್ರ ಸಂಪೂರ್ಣ ವಿಫಲ: ಕಾಂಗ್ರೆಸ್ ಟೀಕೆ

Update: 2016-08-05 16:31 GMT

ಮಡಿಕೇರಿ, ಆ.5: ಕೇಂದ್ರ ಸರಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಮತ್ತು ಬಿಜೆಪಿ ಸರಕಾರವಿರುವ ರಾಜ್ಯಗಳಲ್ಲಿ ದುರ್ಬಲರು ಹಾಗೂ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು.

ಕಾಂಗ್ರೆಸ್ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆ ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಸರಕಾರ ಹಾಗೂ

ಪ್ರಧಾನ ಮಂತ್ರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಿಜೆಪಿ ಸರಕಾರವಿರುವ ರಾಜ್ಯಗಳಲ್ಲಿ ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ. ದಲಿತರ ವಿರುದ್ಧ ಸಂಘ ಪರಿವಾರ ಅಮಾನವೀಯವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್ ಪ್ರಮುಖರು ಅಗತ್ಯ ವಸ್ತುಗಳ ಬೆಲೆಯನ್ನು ಇಳಿಸಬೇಕು ಮತ್ತು ದಲಿತರು ಹಾಗೂ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ 78 ಮಂದಿಯ ಸಚಿವ ಸಂಪುಟದಲ್ಲಿ ಶೇ.31ರಷ್ಟು ಮಂದಿ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು. ಅನೇಕರು ಕೊಲೆ ಯತ್ನ, ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ, ಮತೀಯ ಗಲಭೆ ಸೃಷ್ಟಿ ಮೊದಲಾದ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ಟೀಕಿಸಿದರು.

      

ರಾಜ್ಯದಲ್ಲಿ ವಿರೋಧ ಪಕ್ಷಗಳು ಆಧಾರ ರಹಿತ ಆರೋಪಗಳನ್ನು ಮಾಡುವ ಮೂಲಕ ಕಾಂಗ್ರೆಸ್ ಸರಕಾರವನ್ನು ತೇಜೋವಧೆ ಮಾಡುತ್ತಿವೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ನಿರಂತರ ಅಪಪ್ರಚಾರ ಮಾಡಲಾಗುತ್ತಿದೆಯೆಂದು ಪಕ್ಷದ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಆರೋಪಿಸಿದರು. ಬಿಜೆಪಿ ಪಕ್ಷದಲ್ಲಿರುವ ನಾಯಕರ ವಿರುದ್ಧ ಅನೆೇಕ ಕ್ರಿಮಿನಲ್ ಆರೋಪಗಳಿವೆ. ಆದರೆ, ಇದನ್ನೆಲ್ಲ ಮುಚ್ಚಿಟ್ಟಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ ವಿನಾ ಕಾರಣ ಅಪಪ್ರಚಾರದಲ್ಲಿ ತೊಡಗಿದೆ. ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ಸಾಕಷ್ಟು ದುರಾಡಳಿತ ನಡೆದಿದೆಯೆಂದು ಆರೋಪಿಸಿದ ಅವರು, ರಾಜಕೀಯ ಲಾಭಕ್ಕಾಗಿ ಅಪಪ್ರಚಾರದಲ್ಲಿ ತೊಡಗಿರುವ ಬಿಜೆಪಿ ವಿರುದ್ಧ ರಾಜಕೀಯ ಹೋರಾಟಕ್ಕೆ ಕಾಂಗ್ರೆಸ್ ಸಿದ್ಧವಿದೆ ಎಂದರು. ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಮುಂದುವರಿದರೆ ತೀವ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಟಿ.ಪ್ರದೀಪ್, ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ, ಪ್ರಮುಖರಾದ ಮಿಟ್ಟು ಚಂಗಪ್ಪ, ಚಂದ್ರವೌಳಿ, ಪಿ.ಕೆ. ಪೊನ್ನಪ್ಪ, ಮನು ಕುಟ್ಟಪ್ಪ, ಶೌಕತ್ ಅಲಿ, ಕಾವೇರಪ್ಪ, ಯಾಕೂಬ್, ಸತೀಶ್ ಕುಮಾರ್ ವಿ.ಕೆ., ಕೆ.ಆರ್. ಚಂದ್ರ, ವಕ್ತಾರ ಕೆ.ಕೆ. ಮಂಜುನಾಥ್ ಕುಮಾರ್, ಸರಾ ಚಂಗಪ್ಪ, ಮೂಡಾ ಅಧ್ಯಕ್ಷೆ ಸುರಯ್ಯಾ ಅಬ್ರಾರ್, ನಗರಾಧ್ಯಕ್ಷ ಅಬ್ದುಲ್ ರಝಾಕ್, ಪೂಣಚ್ಚ, ಬ್ಲಾಕ್ ಅಧ್ಯಕ್ಷರಾದ ಕೆ.ಎಂ. ಲೋಕೇಶ್, ಕೆ.ಎಂ. ಗಣೇಶ್, ಧರ್ಮಜ ಉತ್ತಪ್ಪ ನಗರಸಭಾ ಸದಸ್ಯರು ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News