×
Ad

ನಿವೇಶನಗಳ ಸ್ಥಳದಲ್ಲಿ ಅಕ್ರಮ ವ್ಯವಸಾಯ: ಆರೋಪ

Update: 2016-08-05 22:06 IST

ಕಡೂರು, ಆ.5: ತಾಲೂಕಿನ ಹಿರೇನಲ್ಲೂರು ಗ್ರಾಪಂ ವ್ಯಾಪ್ತಿಯ ಕೇದಿಗೆರೆ ಗ್ರಾಮದಲ್ಲಿ ನವ ಗ್ರಾಮ ನಿರ್ಮಾಣ ಯೋಜನೆಯಡಿಯಲ್ಲಿ ಮೀಸಲಿಟ್ಟಿರುವ ನಿವೇಶನಗಳ ಸ್ಥಳದಲ್ಲಿ ಈ ಹಿಂದಿನ ಮಾಲಕರು ಉಳುಮೆ ಮಾಡಿ ವ್ಯವಸಾಯ ಮಾಡುತ್ತಿದ್ದಾರೆ ಎಂದು ಡಿಎಸ್‌ಎಸ್ ತಾಲೂಕು ಸಂಚಾಲಕ ಈಶ್ವರಪ್ಪ ಆರೋಪಿಸಿದ್ದಾರೆ.

 ಗ್ರಾಮದ ಸರ್ವೇ ನಂ. 115/2ರಲ್ಲಿ 2.13 ಎಕರೆ ಜಮೀನನ್ನು ಸರಕಾರ 2002ರ ಎಪ್ರಿಲ್ 29ರಂದು ಎಕರೆಗೆ ರೂ. 50 ಸಾವಿರದಂತೆ ಈ 2.13 ಎಕರೆಯನ್ನು ಇದರ ಮೂಲ ಮಾಲಕಿ ನಿಂಗಮ್ಮ ಅವರಿಂದ ಖರೀದಿಸಿದ್ದು, ಕಡೂರು ತಾಪಂನ ಅಂದಿನ ಕಾರ್ಯನಿರ್ವಾಹಕ ಅಧಿಕಾರಿ ಇದನ್ನು ಕ್ರಯ ಮಾಡಿಕೊಂಡಿದ್ದರು ಎಂದು ತಿಳಿಸಿದ್ದಾರೆ.

ನಂತರ 2002ರ ಮೇ.23ರಂದು ಈ ಜಮೀನಿನಲ್ಲಿ ಆಶ್ರಯ ನಿವೇಶನ ಯೋಜನೆಯಡಿ 60 ನಿವೇಶನಗಳನ್ನು ಗುರುತು ಮಾಡಿ ಚರಂಡಿ, ವಿದ್ಯುತ್ ಕಂಬ ಮುಂತಾದ ಸೌಲಭ್ಯಗಳನ್ನು ಒದಗಿಸಿ 60 ಜನ ಫಲಾನುಭವಿಗಳಿಗೆ ಹಂಚಲಾಗಿತ್ತು ಎಂದು ಹೇಳಿದ್ದಾರೆ.

 ಕೆಲವು ಫಲಾನುಭವಿಗಳು ಈಗಾಗಲೇ ತಮ್ಮ ನಿವೇಶನಗಳಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದು, ಖಾಲಿ ಉಳಿದಿರುವ ನಿವೇಶನ ಸ್ಥಳದಲ್ಲಿ ಈ ಹಿಂದಿನ ಮಾಲಕಿ ನಿಂಗಮ್ಮ ಅವರು ಜೆಸಿಬಿ ಮೂಲಕ ಮೂಲ ಸೌಕರ್ಯ ವ್ಯವಸ್ಥೆಯನ್ನು ನೆಲಸಮ ಮಾಡಿ ವ್ಯವಸಾಯ ಮಾಡುತ್ತಿದ್ದು, ಈ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಲು ಹೋದರೆ ಇದರಲ್ಲಿ ನಿಮಗೆ ಯಾವುದೇ ಹಕ್ಕು ಇಲ್ಲ ಎಂದು ದೌರ್ಜನ್ಯ ಮಾಡಲು ಬರುತ್ತಿದ್ದಾರೆ ಎಂದು ದೂರಿದ್ದಾರೆ.

ಇದರಿಂದ ಗ್ರಾಮದಲ್ಲಿ ಅಶಾಂತಿಯ ವಾತಾವರಣ ಉಂಟಾಗಿದ್ದು, ಗಲಭೆಯಾಗುವ ಸಂಭವವಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಂಡು ಬಡಜನರಿಗೆ ನೀಡಿರುವ ನಿವೇಶನಗಳನ್ನು ಪುನರ್ ಸ್ಥಾಪಿಸಿ ಮನೆ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡುವಂತೆ ಕಂದಾಯ ಸಚಿವರಿಗೆ, ಶಾಸಕರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

(ತಾಲೂಕಿನ ಹಿರೇನಲ್ಲೂರು ಗ್ರಾಪಂ ವ್ಯಾಪ್ತಿಯ ಕೇದಿಗೆರೆ ಗ್ರಾಮದಲ್ಲಿ ನವಗ್ರಾಮ ಯೋಜನೆಯಡಿ ಈ ಹಿಂದೆ ನೀಡಲಾಗಿದ್ದ ನಿವೇಶನಗಳನ್ನು ನೆಲಸಮ ಮಾಡಿರುವುದು.)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News