ತಂತ್ರಜ್ಞಾನ ಬಳಕೆಯಿಂದ ಭತ್ತದ ಬೆಳೆಯಲ್ಲಿ ರೆತರಿಗೆ ಲಾಭ: ಸಚಿವ ಕೃಷ್ಣ ಬೈರೇಗೌಡ
ಮೂಡಿಗೆರೆ, ಆ.5: ಕೃಷಿಯಿಂದ ಬೆಳೆ ನಷ್ಟ ಅನುಭವಿಸುತ್ತಿರುವ ರೈತರು ನಷ್ಟದಿಂದ ಪಾರಾಗಲು ಜೈವಿಕ ತಂತ್ರಜ್ಞಾನ ಅಳವಡಿಸಿಕೊಂಡರೆ ತಾವು ಬೆಳೆದ ಬೆಳೆಯಲ್ಲಿ ಅಧಿಕ ಲಾಭ ಪಡೆಯಲು ಸಾಧ್ಯವಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.
ಅವರು ತಾಲೂಕಿನ ಗೋಣಿಬೀಡು ಹೋಬಳಿಯ ಜಿ.ಹೊಸಳ್ಳಿಯ ರೈತರ ಭತ್ತದ ಗದ್ದೆಯಲ್ಲಿ ನಾಟಿ ಯಂತ್ರ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡು ನಾಟಿ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಇಂದಿನ ದಿನಗಳಲ್ಲಿ ರೈತರು ಸೆಣಬನ್ನು ಬೆಳೆಯದೆ ಇರುವುದರಿಂದ ಭತ್ತದ ಇಳುವರಿ ಕಡಿಮೆಯಾಗುತ್ತಿದೆ. ಹಿಂದಿನ ಕಾಲದಲ್ಲಿ ಸೆಣಬನ್ನು ಬೆಳೆದು ಅದನ್ನು ಭೂಮಿಯಲ್ಲೆ ಹುದುಗಿಸಿ ನಾಟಿ ಕಾರ್ಯ ಪ್ರಾರಂಭಿಸಿದರಿಂದ ಫಸಲು ಹೆಚ್ಚುತ್ತಿತ್ತು. ಈಗ ಸೆಣಬಿನಲ್ಲಿ ಮಣ್ಣಿಗೆ ಬೇಕಾದ ಫಲವತ್ತತೆ ಹೇರಳವಾಗಿ ಇರುವುದರಿಂದ ರೈತರಿಗೆ ಸೆಣಬು ಬೆಳೆ ಸಹಕಾರಿಯಾಗಿದೆ. ಆದರೆ ಕಾಲ ಬದಲಾದಂತೆ ಸೆಣಬನ್ನು ಹಾಕುವುದು ಬಿಟ್ಟು ರಾಸಾಯನಿಕ ಗೊಬ್ಬರಗಳಿಗೆ ಮೊರೆ ಹೋಗಿದ್ದರ ಪರಿಣಾಮ ಭೂಮಿಯು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುವುದರ ಮೂಲಕ ಬೆಳೆ ಇಳುವರಿ ಕ್ಷೀಣಿಸುತ್ತಿದ್ದು ನಷ್ಟವನ್ನು ಹೊಂದುತ್ತಿದ್ದಾರೆ. ರೈತರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಮತ್ತು ಅಧಿಕಾರಿಗಳು ರೈತರಿಗೆ ಸರಿಯಾದ ಮಾಹಿತಿಯನ್ನು ನೀಡುವಂತೆ ತಾಕೀತು ಮಾಡಿದರು.
ಕೃಷಿ ಯಂತ್ರಗಳನ್ನು ಎಲ್ಲಾ ರೈತರು ಖರೀದಿಸಲು ಕಷ್ಟ ಎಂಬ ಕಾರಣಕ್ಕೆ ಪ್ರತಿ ಹೋಬಳಿಯಲ್ಲಿ ಕೃಷಿಯಂತ್ರಧಾರೆ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. 75.ಲಕ್ಷ ರೂ ವೌಲ್ಯದ ಕೃಷಿ ಯಂತ್ರಗಳನ್ನು ಆಯಾ ಪ್ರದೇಶಗಳಿಗನುಗುಣವಾಗಿ ಖರೀದಿಸಿದ್ದು, ಬಾಡಿಗೆ ಆಧಾರದಲ್ಲಿ ಸರಕಾರ ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ಒದಗಿಸಿಕೊಡುತ್ತಿದೆ. ರೈತರು ಇದರ ಪ್ರಯೋಜನ ಪಡೆಯಬೇಕೆಂದು ಮನವಿ ಮಾಡಿದ ಅವರು, ಮಲೆನಾಡಿನಲ್ಲಿ ಕಾರ್ಮಿಕರ ಕೊರತೆ ಎಂದು ಭತ್ತದ ಭೂಮಿಯನ್ನು ಪಾಳು ಬಿಡುವ ಬದಲು ನೂತನ ತಂತ್ರಜ್ಞಾನದ ಮೂಲಕ ನಾಟಿ ಕಾರ್ಯ ಮಾಡಿದಲ್ಲಿ ಸಮಯ ಮತ್ತು ಹಣ ಉಳಿತಾಯವಾಗುವುದರೊಂದಿಗೆ ಅಧಿಕ ಲಾಭವನ್ನು ಪಡೆಯಲು ಸಾಧ್ಯವಿದೆ ಎಂದರು. ಅಲ್ಲದೆ, ಮನೆಯ ಅಂಗಳದಲ್ಲಿ ರೈತರೇ ಸ್ವತಃ ಸಸಿಮುಡಿ ತಯಾರಿಸಿಕೊಳ್ಳುವ ಮೂಲಕ ಕಾರ್ಮಿಕರ ಕೊರತೆಯನ್ನು ನೀಗಿಸಿಕೊಳ್ಳುವ ಸುಲಭ ಉಪಾಯದ ಬಗ್ಗೆ ರೈತರಿಗೆ ಮಾಹಿತಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದಭರ್ದಲ್ಲಿ ಜಿಪಂ ಉಪಾಧ್ಯಕ್ಷ ರಾಮಸ್ವಾಮಿ ಶೆಟ್ಟಿಗದ್ದೆ, ತಾಪಂ ಅಧ್ಯಕ್ಷ ಕೆ,ಸಿ.ರತನ್ ಕುಮಾರ್, ಶಾಮಣ್ಣ, ಅಮಿತಾಮುತ್ತಪ್ಪ, ಸುಧಾಯೋಗೀಶ್, ಸುಂದರ, ದೇವರಾಜು, ಡಿ.ಎಲ್.ಅಶೋಕ್ ಕುಮಾರ್, ಪ್ರಧಾನ ಕಾರ್ಯದರ್ಶಿ ನಾಗೇಶ್ ಪಟ್ಟದೂರು, ಡಿ.ಎಸ್.ರಘು ಮತ್ತಿತರರು ಉಪಸ್ಥಿತರಿದ್ದರು.