ಬಿಲ್ ಕಲೆಕ್ಟರ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
ಶಿವಮೊಗ್ಗ, ಆ. 5: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಂಗ್ರಹಿಸಿದ ಕಂದಾಯ ಹಣವನ್ನು ಕೆಲ ಬಿಲ್ ಕಲೆಕ್ಟರ್‌ಗಳು ದುರ್ಬಳಕೆ ಮಾಡಿಕೊಳ್ಳುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಕುರಿತಂತೆ ಸಂಬಂಧಿಸಿದವರ ವಿರುದ್ಧ ಶಿಸ್ತು ಕ್ರಮ ಜರಗಿಸಬೇಕು ಎಂದು ಜಿಪಂ ಸದಸ್ಯರು ಆಗ್ರಹಿಸಿದ್ದಾರೆ. ಶುಕ್ರವಾರ ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆೆಯಲ್ಲಿ ಈ ವಿಷಯದ ಕುರಿತಂತೆ ಗಂಭೀರ ಚರ್ಚೆ ನಡೆಯಿತು. ಸದಸ್ಯ ಕೆ.ಇ.ಕಾಂತೇಶ್‌ರವರು ವಿಷಯ ಪ್ರಸ್ತಾಪಿಸಿ ಮಾತನಾಡಿದರು. ತಮ್ಮ ಕ್ಷೇತ್ರ ವ್ಯಾಪ್ತಿಯ ಪಿಳ್ಳೆಂಗೆರೆ ಗ್ರಾಮದಲ್ಲಿ ಬಿಲ್ ಕಲೆಕ್ಟರ್‌ವೊಬ್ಬರು ಸಂಗ್ರಹಿಸಿದ ಸುಮಾರು 21 ಸಾವಿರ ರೂ. ಕಂದಾಯ ಹಣವನ್ನು ನಿಗದಿತ ಅವಧಿಯಲ್ಲಿ ಬ್ಯಾಂಕ್‌ಗೆ ಕಟ್ಟಿಲ್ಲ ಎಂದು ದೂರಿದರು. ಕೆಲ ಬಿಲ್ ಕಲೆಕ್ಟರ್‌ಗಳು ಕಂದಾಯ ಹಣವನ್ನು ನಿಯಮಿತವಾಗಿ ಬ್ಯಾಂಕ್‌ಗೆ ಕಟ್ಟುತ್ತಿಲ್ಲ. ತಮ್ಮ ವೈಯಕ್ತಿಕ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹಲವು ದಿನಗಳ ನಂತರ ಬ್ಯಾಂಕ್‌ಗೆ ಕಂದಾಯ ಹಣ ಕಟ್ಟುತ್ತಿದ್ದಾರೆ. ಈ ಹಣದಲ್ಲಿಯೇ ಬಡ್ಡಿ ವ್ಯವಹಾರ ಕೂಡ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಸದಸ್ಯ ಮಂಜುನಾಥ್‌ರವರು ಧ್ವನಿಗೂಡಿಸಿ ಮಾತನಾಡಿ, ಸಮೀಪದ ಗ್ರಾಮದಲ್ಲಿಯೇ ಬ್ಯಾಂಕ್ ಇದ್ದರೆ ಸಾರ್ವಜನಿಕರಿಂದ ಸಂಗ್ರಹಿಸಿದ ಕಂದಾಯ ಹಣವನ್ನು ಸಂಜೆಯೊಳಗೆ ಪಾವತಿಸಬೇಕು. ಒಂದು ವೇಳೆ ಬ್ಯಾಂಕ್ ಇಲ್ಲದಿದ್ದರೆ ಮಾರನೇಯ ದಿನ ಪಾವತಿಸಬೇಕು ಎಂಬ ನಿಯಮವಿದೆ. ಕೆಲವರು ಈ ನಿಯಮ ಪಾಲನೆ ಮಾಡುತ್ತಿಲ್ಲ ಎಂದು ಹೇಳಿದರು. ಮಾಹಿತಿ:
ಈ ಕುರಿತಂತೆ ಸಿಇಒ ಕೆ.ರಾಕೇಶ್‌ಕುಮಾರ್‌ರವರು ಮಾತನಾಡಿ, ಸಂಗ್ರಹಿಸಿದ ಕಂದಾಯವನ್ನು ಕಾಲಮಿತಿಯೊಳಗೆ ಪಾವತಿಸಲಾಗಿದೆಯೇ? ಇಲ್ಲವೇ? ಎಂಬುವುದರ ಬಗ್ಗೆ ಪ್ರತಿಯೊಂದು ಗ್ರಾಪಂನಲ್ಲೂ ಆಡಿಟ್ ನಡೆಸಲಾಗಿದೆ. ಸರಿಸುಮಾರು 13 ಲಕ್ಷ ರೂ. ವಸೂಲಿ ಮಾಡಲಾಗಿದೆ ಎಂದ ತಿಳಿಸಿದರು. ಸದಸ್ಯರ ಕೆ.ಇ.ಕಾಂತೇಶ್‌ರವರು ಮಾತನಾಡಿ, ಹಣ ದುರ್ಬಳಕೆ ಮಾಡಿಕೊಂಡವರ ವಿರುದ್ಧ ಕ್ರಮ ಜರಗಿಸಲ್ಲವೇಕೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ವಿವಿಧ ಹಂತದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಕುರಿತಂತೆ ಸಂಬಂಧಿಸಿದವರಿಂದ ಸಮಗ್ರ ವಿವರ ಕೊಡಿಸುವುದಾಗಿ ಹೇಳಿದರು.
ಅರ್ಧ ಗಂಟೆ ಕಲಾಪ ವ್ಯರ್ಥ
ಸಭೆ ಆರಂಭವಾಗುತ್ತಿದ್ದಂತೆ ಚರ್ಚೆ ನಡೆಸಲು ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಹಾಗೂ ವಿರೋಧ ಪಕ್ಷ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಎರಡೂ ಪಕ್ಷಗಳ ಸದಸ್ಯರು ಆರೋಪ-ಪ್ರತ್ಯಾರೋಪ ನಡೆಸಿದರು. ಇದರಿಂದ ಸರಿಸುಮಾರು ಅರ್ಧ ಗಂಟೆಯ ಕಲಾಪ ವ್ಯರ್ಥವಾಗುವಂತಾಯಿತು. ಬಿಜೆಪಿ ಸದಸ್ಯ ಕೆ.ಇ.ಕಾಂತೇಶ್‌ರವರು ಮಾತನಾಡಿ, ಕೆಲ ಬಿಲ್ ಕಲೆಕ್ಟರ್‌ಗಳು ಕಂದಾಯ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ವಿಷಯದ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡುವಂತೆ ಅಧ್ಯಕ್ಷೆಗೆ ಮನವಿ ಮಾಡಿದರು. ಮತ್ತೊಂದೆಡೆ ಕಾಂಗ್ರೆಸ್ ಸದಸ್ಯ ಕಲಗೋಡು ರತ್ನಾಕರವರು ಮಾತನಾಡಿ, ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬರ ಪರಿಸ್ಥಿತಿಯಿದೆ. ಈ ಕುರಿತಂತೆ ಚರ್ಚಿಸಲು ನಿಲುವಳಿ ಮಂಡಿಸಿದ್ದೇನೆ. ಮೊದಲು ಈ ವಿಷಯದ ಬಗ್ಗೆ ಚರ್ಚೆ ನಡೆಸಲು ಅಧ್ಯಕ್ಷರು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಬಿಜೆಪಿ ಸದಸ್ಯರು ಹಾಗೂ ಕಾಂಗ್ರೆಸ್-ಜೆಡಿಎಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ಕಲಗೋಡು ರತ್ನಾಕರವರೇ ಚರ್ಚೆ ಆರಂಭಿಸಿದರು.