ಮೀನುಗಾರಿಕಾ ದೋಣಿ ದುರಂತ ಸಂತ್ರಸ್ತರನ್ನು ಭೇಟಿಯಾದ ಸಚಿವ ಮಧ್ವರಾಜ್
ಭಟ್ಕಳ,ಆ.5: ದೋಣಿ ದುರಂತದಲ್ಲಿ ಬದುಕುಳಿದು ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 7ಜನ ಮೀನುಗಾರರನ್ನು ರಾಜ್ಯ ಮೀನುಗಾರಿಕ ಸಚಿವ ಪ್ರಮೋದ್ ಮಧ್ವರಾಜ್ ಶುಕ್ರವಾರ ಭೇಟಿಯಾಗಿ ಅವರ ಆರೋಗ್ಯವನ್ನು ವಿಚಾರಿಸಿದರು. ಗುರುವಾರ ಅರಬಿಯನ್ ಸಮುದ್ರದಲ್ಲಿ ಹವಮಾನ ವೈಪರಿತ್ಯದಿಂದಾಗಿ ಭಟ್ಕಳದಿಂದ ಮೀನುಗಾರಿಕೆಗೆ ತೆರಳಿದ ದೋಣಿಯೊಂದು ದುರಂತಕ್ಕೀಡಾಗಿ ಓರ್ವ ಮೀನುಗಾರ ನಾಪತ್ತೆಯಾಗಿದ್ದು, 7ಜನರು ಸತತ ಒಂಬತ್ತು ತಾಸು ಸಮುದ್ರದಲ್ಲಿ ಈಜಿ ಸಾವನ್ನು ಗೆದ್ದು ಬಂದಿದ್ದಾರೆ. ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂದರ್ಭದಲ್ಲಿ ದುರಂತದಲ್ಲಿ ನಾಪತ್ತೆಯಾಗಿರುವ ಮಂಜುನಾಥ್ ಖಾರ್ವಿಯವರ ತಾಯಿ, ಪತ್ನಿ ಹಾಗೂ ಮಕ್ಕಳನ್ನು ಭೇಟಿಯಾಗಿ ಅವರನ್ನು ಸಂತೈಸಿದ ಸಚಿವರು ಸರಕಾರದಿಂದ ದೊರೆಯುವ ಪರಿಹಾರವನ್ನು ಕೂಡಲೇ ದೊರೆಯುವಂತೆ ಪ್ರಯತ್ನಿಸುತ್ತೇನೆ. ಕನಿಷ್ಠ 5ಲಕ್ಷ ರೂ.ವರೆಗೂ ಪರಿಹಾರ ನೀಡುವ ಕುರಿತುಆಶ್ವಾಸನೆ ನೀಡಿದರು.
ನಂತರ ದೋಣಿ ದುರಂತದಲ್ಲಿ ಬದುಕುಳಿದ ಮೀನುಗಾರರ ಆರೋಗ್ಯವನ್ನು ವಿಚಾರಿಸಿದ ಸಚಿವರು ಕೆಲವೊಂದು ಸಲಹೆಗಳನ್ನು ನೀಡಿದರು. ನಮ್ಮ ಬದುಕು ಅಮೂಲ್ಯವಾಗಿದ್ದು ಅದನ್ನು ಉಳಿಸುವ ಹೊಣೆ ನಮ್ಮದಾಗಿದೆ. ನಮ್ಮ ಹಿಂದೆ ಇಡೀ ಕುಟುಂಬ ಅವಲಂಬಿತವಾಗಿರುತ್ತದೆ.ಮೀನುಗಾರಿಕೆಗೆ ತೆರಳುವಾಗ ಎಚ್ಚರಿಕೆಯನ್ನು ವಹಿಸಬೇಕಾಗಿದ್ದು ಸುರಕ್ಷತೆ ಕುರಿತಂತೆ ಜಾಗೃತೆ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಖಾರ್ವಿ ಸಮಾಜದ ಮುಖಂಡ ವಸಂತ ಖಾವಿ, ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ್, ಕಾಂಗ್ರೆಸ್ ಮುಖಂಡ ರಾಮಮೊಗೇರ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.