ಅನ್ಯಾಯದ ವಿರುದ್ಧ ಹೋರಾಡಲು ವಿದ್ಯಾರ್ಥಿಗಳಿಗೆ ಕರೆ
ಸಾಗರ, ಆ. 5: ರಾಜಕೀಯ ವಿಜ್ಞಾನದ ಆಶಯಗಳು ಬುಡಮೇಲಾದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗುವುದು ಖಚಿತ ಎಂದು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಬಿ.ರಾಘವೇಂದ್ರ ಹೇಳಿದ್ದಾರೆ.
ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ರಾಜ್ಯಶಾಸ್ತ್ರ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ರಾಜನೀತಿಯಲ್ಲಿ ಗುಣಮಟ್ಟ ಕಳಪೆಯಾಗಿರುವುದರಿಂದ ಜನಪ್ರತಿನಿಧಿಗಳ ಆಯ್ಕೆಯಲ್ಲೂ ಕಳಪೆ ಗುಣಮಟ್ಟವನ್ನು ಕಾಣುತ್ತಿದ್ದೇವೆ ಎಂದರು. ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಾಗ ಹಾಗೂ ಮಾನವಹಕ್ಕುಗಳ ಉಲ್ಲಂಘನೆ ಆದಾಗಲೆಲ್ಲಾ ರಾಜ್ಯಶಾಸ್ತ್ರದ ವಿದ್ಯಾರ್ಥಿಗಳು ಮುಂಚೂಣಿಗೆ ಬಂದು ಪ್ರತಿರೋಧಿಸುವ ಅಗತ್ಯವಿದೆ. ಪ್ರಮುಖವಾಗಿ ಶಿಕ್ಷಣ, ಸಮಾಜದಲ್ಲಿನ ಪಲ್ಲಟಗಳನ್ನು ರಾಜ್ಯಶಾಸ್ತ್ರದ ವಿದ್ಯಾರ್ಥಿಗಳು ಗಮನಿಸಬೇಕಾಗಿದೆ ಎಂದರು. ಗಾಂಧಿ, ಅಂಬೇಡ್ಕರ್, ಲೋಹಿಯಾ, ಬುದ್ಧ್ದ, ಬಸವ ಪ್ರಜ್ಞೆಯಿಂದ ಬೆಳೆದ ನಮ್ಮ ಸಮಾಜವನ್ನು ಡೋಂಗಿ ಮತ್ತು ದಲ್ಲಾಳಿ ಪ್ರಜ್ಞೆ ಅಪಹರಿಸಿದೆ. ಇದರಿಂದಾಗಿ ಸಮಾಜ ದಿಕ್ಕು ತಪ್ಪುತ್ತಿದೆ. ಈ ಹಂತದಲ್ಲಿ ವಿದ್ಯಾರ್ಥಿ ಯುವಜನರು ಮಧ್ಯಪ್ರವೇಶಿಸುವ ಅಗತ್ಯವಿದೆ. ಬದುಕಿ ಉಳಿಯುವುದೇ ದೊಡ್ಡ ಸಾಧನೆಯಲ್ಲ. ಬದುಕಿ ಉಳಿಯುವ ಅನೇಕ ರೀತಿಗಳು ನಮ್ಮ ನಡುವೆ ಇದೆ. ಎಲ್ಲ ತರಹದ ಬದುಕು ನಮ್ಮ ಗೌರವವನ್ನು ಹೆಚ್ಚಿಸುವುದಿಲ್ಲ. ಒಬ್ಬ ವ್ಯಕ್ತಿಯಾಗಲಿ ಅಥವಾ ಸಮಾಜವಾಗಲಿ ಸುಮ್ಮನೆ ಜೀವಂತವಾಗಿ ಉಳಿಯುವುದಕ್ಕೂ ಘನತೆ ಗೌರವದಿಂದ ಬಾಳಿ ಬದುಕುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂದರು. ನಾಯಕತ್ವ ಮತ್ತು ರಾಜಕೀಯ ಪ್ರಜ್ಞೆ ವಿಷಯ ಕುರಿತು ಉಪನ್ಯಾಸ ನೀಡಿದ ಇಂದಿರಾಗಾಂಧಿ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಪ್ರೊ ಎ. ಗಣೇಶಭಟ್ ಮಾತನಾಡಿ, ನಾಯಕತ್ವಕ್ಕೆ ಅಗತ್ಯವಾಗಿ ಬೇಕಾಗಿರುವುದು ಬದ್ಧ್ದತೆ, ನೈತಿಕತೆ ಮತ್ತು ಉತ್ಸಾಹ. ಸಮಾಜದಲ್ಲಿರುವ ಸಾಂಸ್ಕೃತಿಕ ಮತ್ತು ರಾಜಕೀಯ ನಾಯಕರಿಗೆ ಈ ಮೂರು ಅಂಶಗಳು ಪ್ರಮುಖವಾಗಿ ಇರಬೇಕಾಗುತ್ತದೆ. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿದೆಸೆಯಲ್ಲೆ ಇಂತಹ ಗುಣ ಬೆಳೆಸಿಕೊಂಡರೆ ಭವಿಷ್ಯದಲ್ಲಿ ತಮ್ಮ ಬದುಕನ್ನು ರೂಪಿಸಿಕೊಳ್ಳುವ ಜೊತೆಗೆ ಸಮಾಜದ ಒಳಿತಿಗೆ ಕಾರಣರಾಗಬಹುದು ಎಂದರು. ಪ್ರಾಚಾರ್ಯ ಪ್ರೊ. ಜಗದೀಶ್ ಎ.ಬಿ. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪನ್ಯಾಸಕರಾದ ಭಾರತಿ, ಲೋಕೇಶ್ ಟಿ. ಉಪಸ್ಥಿತರಿದ್ದರು.