ಮಹಾದಾಯಿ ಹೋರಾಟದ ಅಮಾಯಕರನ್ನು ಬಿಡುಗಡೆ ಮಾಡಬೇಕು : ಜಗದೀಶ ಶೆಟ್ಟರ್
ಮುಂಡಗೋಡ, ಆ.6: ಮಹಾದಾಯಿ ನೀರಿನ ಮಧ್ಯಂತರ ತೀರ್ಪಿನ ವಿಚಾರದಲ್ಲಿ ರೈತರು ನೀರಿಗಾಗಿ ಹೋರಾಟ ಮಾಡುತ್ತಿದ್ದಾಗ ಪೊಲೀಸರು ದೌರ್ಜನ್ಯ ತೋರಿ ಕಂಡಕಂಡವರಿಗೆ ಹೊಡೆದು ಬಡಿದು ಸುಮಾರು 187 ಹೊರಾಟಗಾರರಿಗೆ ಜೈಲಿಗೆ ಅಟ್ಟಿರುವುದು ಅಕ್ಷಮ್ಯ ಅಪರಾಧ. ಹೋರಾಟದಲ್ಲಿ ಇಲ್ಲದವರ ಮನೆಮನೆ ಒಳಹೊಕ್ಕು ಅಮಾಯಕರನ್ನು ಎಳೆತಂದು ಜೈಲಿಗೆ ಅಟ್ಟಿರುವುದನ್ನು ಬಿಜೆಪಿ ಖಂಡಿಸುತ್ತಿದೆ. ಅಲ್ಲದೆ, ರೈತರಿಗೆ ನ್ಯಾಯವೊದಗಿಸಲು ಹೋರಾಟ ಮಾಡಲಾಗುವುದು ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 7ರಂದು ಮುಖ್ಯಮಂತ್ರಿಗಳು ಸರ್ವ ಪಕ್ಷ ಸಭೆ ಕರೆದಿದ್ದಾರೆ. ಈ ಸಂದರ್ಭ ಸೇರಿರುವ ಅಮಾಯಕರನ್ನು ಬೇಶರತ್ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಗುವುದು. ಒತ್ತಾಯಕ್ಕೆ ಮಣಿಯದಿದ್ದರೆ ರಾಜ್ಯದ್ಯಾಂತ ಹೋರಾಟ ನಡೆಸಲಾಗುವುದು. ಅಮಾಯಕರಿಗೆ ನ್ಯಾಯ ಒದಗಿಸುವುದೇ ನಮ್ಮ ಆದ್ಯ ಕರ್ತವ್ಯ ಎಂದರು.
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಪ್ರತಿಪಕ್ಷಗಳ ಹೋರಾಟದಿಂದ ಸಚಿವ ಜಾರ್ಜ್‌ರ ರಾಜಿನಾಮೆ ಪಡೆಯಲಾಗಿತ್ತು. ಈ ಪ್ರಕರಣವನ್ನು ಸಿಒಡಿಗೆ ಕೊಡಲು ಹೇಳಿದರೂ ಸಿಐಡಿ ಮತ್ತು ನ್ಯಾಯಾಂಗ ತನಿಖೆಗೆ ಕೊಟ್ಟಿದ್ದಾರೆ. ನ್ಯಾಯಾಂಗ ತನಿಖೆ ಮಾಡುವುದಕ್ಕೆ ಅಧಿಕಾರಿಗಳು ತಯಾರಿದ್ದರೂ ಅವರಿಗೆ ಸಿಬ್ಬಂದಿ, ಕೊಠಡಿ ಮತ್ತು ವಾಹನಗಳನ್ನು ಕೊಡದೆ ಕಾಲಹರಣ ಮಾಡಿ ಜಾರ್ಜ್‌ರನ್ನು ರಕ್ಷಣೆ ಮಾಡುವ ಕೆಲಸ ಸರಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಗೋವಾ ರಾಜ್ಯ ಮತ್ತು ಮಹಾರಾಷ್ಟ್ರ ಮತ್ತು ಕೇಂದ್ರ ಸರಕಾರ ಹತ್ತು ವರ್ಷದಿಂದ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಮಹದಾಯಿ ತೀರ್ಪಿನ ಬಗ್ಗೆ ಚರ್ಚೆ ಮಾಡಬಹುದಿತ್ತು. ಈಗ ಕೇಂದ್ರದಲ್ಲಿ ಮೋದಿ ಸರಕಾರ ಇರುವುದರಿಂದ ಬಿಜೆಪಿ ಮೇಲೆ ಗೊಬೆ ಕುರಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಈಗಲೂ ಕಾಲ ಮಿಂಚಿಲ್ಲ, ಸರ್ವಪಕ್ಷಗಳು ಸೇರಿ ಈ ಮಹದಾಯಿ ಯೋಜನೆ ಸಮಸ್ಯೆಯನ್ನು ಬಗೆಹರಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ವಿ.ಎಸ್.ಪಾಟೀಲ, ಬಸುವರಾಜ ಓಶಿಮಠ, ಎಸ್.ಪಿ.ಸಮ್ಮಸಗಿ, ಬಿ.ಎಂ.ರಾಯ್ಕರ, ಗುಡ್ಡಪ್ಪ ಕಾತೂರ, ನಾಗಭೂಷಣ ಹಾವಣಗಿ, ಫಣಿರಾಜ ಹದಳಗಿ, ರಾಜು ನಾಯಕ (ವಡಗಟ್ಟಾ), ಚೆನ್ನಪ್ಪ ಹಿರೇಮಠ, ಸುಭಾಸ ಲಮಾಣಿ, ವ್ಯಾ.ಪಿ.ಪಾಟೀಲ, ಚಂದ್ರು ಗಾಣಿಗೇರ ಮುಂತಾದವರು ಉಪಸ್ಥಿತರಿದ್ದರು.