‘ಭಯೋತ್ಪಾದನೆಗೂ ಮುಸ್ಲಿಮರಿಗೂ ಸಂಬಂಧವಿಲ್ಲ’
ಮೂಡಿಗೆರೆ, ಆ.6: ಭಯೋತ್ಪಾದನೆಗೂ ಮುಸ್ಲಿಮರಿಗೂ ಸಂಬಂಧವಿಲ್ಲ. ಒಂದು ಕ್ರಿಮಿ ಕೀಟವನ್ನು ಕೊಲ್ಲುವ ಅಧಿಕಾರವನ್ನು ಪವಿತ್ರ ಕುರ್‌ಆನ್ ಮುಸ್ಲಿಮರಿಗೆ ನೀಡಿಲ್ಲ. ಕುರ್‌ಆನ್ ಗ್ರಂಥವನ್ನೇ ಧಿಕ್ಕರಿಸಿ ಮನುಷ್ಯನನ್ನೇ ಕೊಲ್ಲುವ ಕ್ರೂರಿಗಳಾದ ಉಗ್ರಗ್ರಾಮಿಗಳು ಮನುಷ್ಯ ಜಾತಿಯೇ ಅಲ್ಲ. ಅಂದ ಮೇಲೆ ಅವರು ಮುಸ್ಲಿಮರಾಗಲು ಹೇಗೆ ಸಾಧ್ಯ ಎಂದು ಜಂಇಯತುಲ್ ಮುಅಲ್ಲಿಮೀನ್ ಜಿಲ್ಲಾಧ್ಯಕ್ಷ ಅನ್ವರ್ ಸಾದಿಕ್ ಮುಸ್ಲಿಯಾರ್ ಪ್ರಶ್ನಿಸಿದ್ದಾರೆ.
ಅವರು ಶನಿವಾರ ಭಯೋತ್ಪಾದನಾ ವಿರೋಧಿ ಹೋರಾಟ ಸಮಿತಿ ಆಯೋಜಿಸಿದ್ದ ಭಯೋತ್ಪಾದನೆ ವಿರುದ್ಧ ಪ್ರತಿಭಟನೆಯಲ್ಲಿ ಮಾತನಾಡಿದರು. ಸಂಸ್ಕಾರವಂತರಾಗಲು ಗುರುವಿನ ಪಾಠ ಕೇಳುವುದು ಅಗತ್ಯವಾಗಿದೆ ಎಂದು ಹೇಳಿದರು. ಸಾದಿಕ್ ಅಝ್‌ಹರಿ ಮಾತನಾಡಿ, ಯಾವುದೇ ವ್ಯಕ್ತಿಯು ಉಗ್ರಗ್ರಾಮಿ ಚಟುವಟಿಕೆಯಲ್ಲಿ ತೊಡಗಿದ್ದರೆ ಅಂತವರನ್ನು ಸರಕಾರ ನಿರ್ದಾಕ್ಷಿಣ್ಯವಾಗಿ ಕಠಿಣ ಶಿಕ್ಷೆಗೊಳಪಡಿಸಬೇಕು. ಉಗ್ರಗ್ರಾಮಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಸಂಘಟನೆಗಳ ಮೇಲೆ ತೀವ್ರ ತರವಾಗಿ ನಿಗಾ ಇಡಬೇಕು ಎಂದು ಒತ್ತಾಯಿಸಿದರು. ಭಯೋತ್ಪಾದನಾ ವಿರೋಧಿ ಹೋರಾಟ ಸಮಿತಿ ಸಂಚಾಲಕ ಝಕರಿಯಾ ಮಾತನಾಡಿ, ದೇಶ ಮತ್ತು ಧರ್ಮವನ್ನು ಪ್ರೀತಿಸದವರು ಈ ಭಾರತ ಭೂಮಿಯಲ್ಲಿ ಬದುಕಲು ಅರ್ಹರಲ್ಲ. ಭಯೋತ್ಪಾದನಾ ಕೃತ್ಯಗಳು ನಡೆದಾಗ ಅಮಾಯಕ ಮುಸ್ಲಿಮರನ್ನು ಬಂಧಿಸಿ ಹಿಂಸೆಗೊಳಪಡಿಸುವ ಬದಲು, ನೈಜ ಭಯೋತ್ಪಾದಕರನ್ನು ಪತ್ತೆ ಹಚ್ಚಿ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆಯಬೇಕೆಂದು ಒತ್ತಾಯಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿ ಭಾರತ ಮಾತೆಗೆ ಜೈಕಾರ ಕೂಗಿ, ಭಯೋತ್ಪಾದಕರಿಗೆ ಹಾಗೂ ದೇಶದ್ರೋಹಿಗಳಿಗೆ ಧಿಕ್ಕಾರದ ಘೋಷಣೆ ಕೂಗಿದರು. ನಂತರ ಲಯನ್ಸ್ ವೃತ್ತದಲ್ಲಿ ಸಭೆೆ ನಡೆಸಿದ ಬಳಿಕ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಮೂಲಕ ರಾಜ್ಯಪಾಲ, ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಶರೀಫ್ ಅರ್ಶದಿ, ಯಾಕೂಬ್, ಅಬ್ದುಲ್ ಕರೀಮ್, ಬದ್ರುದ್ದೀನ್, ಅಬ್ದುಲ್ ರಝಾಕ್, ಮುಹಮ್ಮದ್ ಶಬ್ಬಿರ್, ಆಸಿಫ್, ಸುಹೇಲ್,, ಹಬೀಬ್, ಇರ್ಷಾದ್, ನಿಯಾಝ್ ಉಪಸ್ಥಿತರಿದ್ದರು.