×
Ad

ರಸ್ತೆ ದುಸ್ಥಿತಿ, ಡೆಂಗ್ ಬಗ್ಗೆ ತಾಪಂ ಸಭೆಯಲ್ಲಿ ಚರ್ಚೆ

Update: 2016-08-06 22:15 IST

 ಕಾರವಾರ, ಆ.6: ತಾಲೂಕಿನ ಗ್ರಾಮೀಣ ರಸ್ತೆಗಳ ದುಸ್ಥಿತಿ, ಡೆಂಗ್ ಜ್ವರ ನಿಯಂತ್ರಣ, ಹೆಸ್ಕಾಂನಿಂದ ಎಲ್‌ಇಡಿ ಬಲ್ಬ್ ವಿತರಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ನಗರದ ತಾಪಂ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಚರ್ಚೆಗಳು ನಡೆದವು. ಕಾರವಾರ ತಾಲೂಕಿನಲ್ಲಿ ಈಗಾಗಲೇ ಸಾಕಷ್ಟು ಡೆಂಗ್ ಪ್ರಕರಣಗಳು ಹೆಚ್ಚಿದೆ. ಕಡವಾಡದಲ್ಲಿ 4, ಶಿರವಾಡದಲ್ಲಿ 5 ಹಾಗೂ ದೇವಭಾಗದಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ಆದರೆ ಆರೋಗ್ಯ ಇಲಾಖೆ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಕೆಲ ಸದಸ್ಯರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ತಾಲೂಕು ವೈದ್ಯಾಧಿಕಾರಿ ಸೂರಜಾ ನಾಯ್ಕ, ಸ್ವಚ್ಛತೆಯ ಕೊರತೆಯಿಂದ ಸೊಳ್ಳೆಗಳ ಉತ್ಪಾದನೆ ಹೆಚ್ಚುತ್ತಿದೆ. ಇದು ಡೆಂಗ್ ಜ್ವರ ಹರಡಲು ಕಾರಣವಾಗಿದೆ. ಸ್ಥಳೀಯ ಆಡಳಿತ ಸಂಸ್ಥೆಗಳು ಸ್ವಚ್ಛತೆಯೆಡೆಗೆ ಗಮನಹರಿಸಬೇಕಿದೆ. ಕಳೆದ ತಾಪಂ ಸಭೆಯಲ್ಲಿಯೂ ಈ ಕುರಿತು ಚರ್ಚೆಯಾಗಿತ್ತು. ನಗರದ ಸ್ವಚ್ಛತೆಯಡೆಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ನಗರಸಭೆ ಅಧಿಕಾರಿಗಳನ್ನು ಸಭೆಗೆ ಕರೆಯಲು ಸೂಚನೆ ನೀಡಲಾಗಿತ್ತು ಎಂದರು.

ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಅದರಲ್ಲೂ ಶಿರವಾಡ, ದೇವಳಿವಾಡ, ವಹಿಲವಾಡಿ ಮೊದಲಾದ ಭಾಗಗಳಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಲು ಕೆಲವೆಡೆ ರಸ್ತೆ ಮೇಲೆ ತೆಗೆದ ಹೊಂಡವನ್ನು ಇನ್ನೂ ಮುಚ್ಚಿಲ್ಲ. ಇದರಿಂದ ಜನರಿಗೆ ಸಂಚಾರ ಸಂಕಷ್ಟವಾಗುತ್ತಿದೆ ಎಂದು ಸದಸ್ಯರು ಆಕ್ಷೇಪಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಅಶೋಕ ಕುಮಾರ, ಗ್ರಾಮೀಣ ಕುಡಿಯುವ ನೀರಿನ ಇಲಾಖೆಯಡಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ಪೈಪ್‌ಲೈನ್ ಅಳವಡಿಸಲು ರಸ್ತೆ ಅಗೆಯಲಾಗಿದೆ. ನಿಯಮದ ಪ್ರಕಾರ ಅಗೆಯಲಾದ ರಸ್ತೆ ದುರಸ್ತಿ ವೆಚ್ಚವನ್ನು ಕುಡಿಯುವ ನೀರಿನ ಇಲಾಖೆಯವರು ಭರಿಸಬೇಕು ಎಂದರು. ಇಲಾಖೆಯಿಂದ ಮೇವು ಬೆಳೆಯಲು ಮೇವಿನ ಬೀಜವನ್ನು ಉಚಿತವಾಗಿ ನೀಡಲಾಗುತ್ತಿದೆ. ಕನಿಷ್ಠ 10 ಗುಂಟೆ ಜಮೀನು ಇದ್ದವರೂ ಬೀಜ ಪಡೆಯಲು ಅರ್ಹರಾಗಿದ್ದಾರೆ. ಈವರೆಗೆ 107 ರೈತರಿಗೆ ಬೀಜ ವಿತರಿಸಲಾಗಿದೆ ಎಂದರು. ಅಂಗನವಾಡಿಯಲ್ಲಿ ಮಕ್ಕಳಿಗೆ ಆಟಿಕೆಗಳ ವಿತರಣೆ, ಅಕ್ಷರ ದಾಸೋಹ ಹೆಚ್ಚಳ ಮೊದಲಾದ ವಿಷಯಗಳ ಕುರಿತು ಚರ್ಚೆ ನಡೆಯಿತು.

ಈ ಸಂದರ್ಭ ತಾಪಂ ಅಧ್ಯಕ್ಷೆ ಪ್ರಮೀಳಾ ನಾಯ್ಕ, ರವೀಂದ್ರ ಪವಾರ, ಪುರುಷೋತ್ತಮ ಗೌಡ, ಶ್ರೀಕಾಂತ ಹೆಗಡೆ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News