×
Ad

ಮಡಿಕೇರಿಗೆ ಹರಿದು ಬಂತು ನಿವೃತ್ತ ಯೋಧರ ದಂಡು

Update: 2016-08-06 22:19 IST

ಜನರಲ್ ದಲ್ಬೀರ್ ಸಿಂಗ್‌ರಿಂದ ಸಮಸ್ಯೆಗಳ ಬಗ್ಗೆ ಸಮಾಲೋಚನೆ, ಭರವಸೆ ಮಡಿಕೇರಿ ಆ.6: ಕರ್ನಾಟಕ ಮತ್ತು ಕೇರಳ ಸಬ್ ಏರಿಯಾದ ವತಿಯಿಂದ ನಡೆದ ಸೇವಾ ನಿವೃತ್ತ ಯೋಧರ ಬೃಹತ್ ಸಮಾವೇಶದಲ್ಲಿ ವೀರ ಸೇನಾನಿಗಳ ನಾಡು ಕೊಡಗಿನ ಸಹಸ್ರಾರು ನಿವೃತ್ತ ಯೋಧರು ಹಾಗೂ ಅವರ ಅವಲಂಬಿತರು ಪಾಲ್ಗೊಂಡು ಭಾರತೀಯ ಭೂಸೇನೆಯ ವರಿಷ್ಠ ಜನರಲ್ ದಲ್ಬೀರ್ ಸಿಂಗ್ ಸುಹಾಗ್‌ರೊಂದಿಗೆ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿದರು.

 ಜಿಲ್ಲಾ ಕೇಂದ್ರ ಮಡಿಕೇರಿಯ ಕ್ರಿಸ್ಟಲ್ ಕೋರ್ಟ್ ಹಾಲ್‌ನಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಭೂಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್, ನಿವೃತ್ತ ಯೋಧರು, ಹುತಾತ್ಮ ಯೋಧರ ಅವಲಂಬಿತರು ಹಾಗೂ ಮಕ್ಕಳಿಗೆ ಸಮಾಜದಲ್ಲಿ ಅತ್ಯುನ್ನತ ಪ್ರೀತಿ, ಗೌರವಗಳು ದೊರೆಯಬೇಕು. ಕೊಡಗು ಭಾರತ ಭೂಮಿಯಲ್ಲಿ ಅತ್ಯಂತ ಶ್ರೇಷ್ಠ ಪ್ರದೇಶವಾಗಿದ್ದು, ಇಲ್ಲಿಂದ ಭಾರತೀಯ ಭೂ ಸೇನೆೆ, ವಾಯುಪಡೆ ಮತ್ತು ನೌಕಾಪಡೆಗೆ ಅದ್ವಿತೀಯ ಯೋಧರು ಹಾಗೂ ಅಧಿಕಾರಿಗಳನ್ನು ನೀಡಿದೆ ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು.

ಭಾರತೀಯ ಸೇನೆಯ ಪ್ರಥಮ ಮಹಾದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್.ತಿಮ್ಮಯ್ಯ ಅವರನ್ನು ಸ್ಮರಿಸಿದ ದಲ್ಬೀರ್ ಸಿಂಗ್ ಸುಹಾಗ್, ತಾವು ಭೂ ಸೇನೆಯ ವಿವಿಧ ಹಂತಗಳಲ್ಲಿ ವಿವಿಧ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಬೆಂಗಳೂರಿನಲ್ಲಿ ಫೀಲ್ಡ್ ಮಾರ್ಷಲ್ ಅವರನ್ನು 1982-84ರ ನಡುವೆ ಭೇಟಿ ಆಗುವ ಅವಕಾಶಗಳು ಲಭ್ಯವಾಗಿತ್ತು. ಅವರೊಂದಿಗೆ ಉಪಾಹಾರ ಮತ್ತು ಭೋಜನ ಮಾಡಿದ್ದನ್ನು ಹಾಗೂ ವಿಧಾನಸೌಧಕ್ಕೆ ಅವರೊಂದಿಗೆ ತೆರಳಿದ್ದೆ ಎಂದು ಸ್ಮರಿಸಿದರು.

ಕೊಡಗಿನ ಹಿರಿಯ ಸೇನಾಧಿಕಾರಿಗಳಾದ ಲೆಫ್ಟಿನೆಂಟ್ ಜನರಲ್ ಸಿ.ಎನ್ ಸೋಮಣ್ಣ, ಲೆಫ್ಟಿನೆಂಟ್ ಜನರಲ್ ಬಿ.ಕೆ. ಬೋಪಣ್ಣ, ಲೆಫ್ಟಿನೆಂಟ್ ಜನರಲ್ ಬಿ.ಕೆ. ಚಂಗಪ್ಪ ಅವರನ್ನು ದಲ್ಬೀರ್ ಸಿಂಗ್ ಉಲ್ಲೇಖಿಸಿದರು. ಅಖಿಲ ಭಾರತ ಮಟ್ಟದ ಸ್ಮರ್ಧಾತ್ಮಕ ಪರೀಕ್ಷೆಗಳಲ್ಲಿ ಕೊಡಗಿನ ಮೊದಲ ಮಹಿಳೆ ಸಾಧನೆ ಮಾಡಿರುವುದು ಮಾತ್ರವಲ್ಲದೇ ಕ್ರೀಡಾ ಕ್ಷೇತ್ರದಲ್ಲಿ ಕೂಡ ಅದ್ವೀತೀಯ ಸಾಧನೆ ಮಾಡಿರುವ ಕೊಡಗು ತನ್ನ ವೀರಪರಂಪರೆಗೆ ಹೆಸರಾಗಿದೆ. ನಿವೃತ್ತ ಯೋಧರಿಗೆ ಮತ್ತು ಅವರ ಅವಲಂಬಿತರಿಗೆ ಸರಿಯಾದ ಸೇವಾ ಸೌಲಭ್ಯಗಳು, ಪಿಂಚಣಿ ವ್ಯವಸ್ಥೆ ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮದಾಗಿದೆ ಎಂದು ಜನರಲ್ ದಲ್ಬೀರ್ ಸಿಂಗ್ ಸುಹಾಗ್ ತಿಳಿಸಿದರು.

ಕೊಡಗಿನ ಪೀಚೆ ಕತ್ತಿ ನೀಡಿ ಗೌರವ

ಜನರಲ್ ಸುಹಾಗ್ ಅವರಿಗೆ ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ.ಸಿ.ನಂದ ಕೊಡವ ಸಾಂಪ್ರದಾಯಿಕ ಪೀಚೆ ಕತ್ತಿಯನ್ನು ನೀಡಿ ಗೌರವಿಸಿದರು. ಅದೇ ರೀತಿ ದಕ್ಷಿಣ ವಲಯ ಭೂ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರಿಗೆ ಮತ್ತು ಏರಿಯಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಜಸ್ಬೀರ್ ಸಿಂಗ್ ಅವರಿಗೆ ಕೊಡವ ಸಾಂಪ್ರದಾಯಿಕ ವಡಿಕತ್ತಿಯನ್ನು ನೀಡಿ ಗೌರವಿಸಿದರು.

ವೇದಿಕೆಯಲ್ಲಿ ನಿವೃತ್ತ ಏರ್‌ಮಾರ್ಷಲ್ ಕೆ.ಸಿ.ಕಾರ್ಯಪ್ಪ, ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಕರ್ನಾಟಕ, ಕೇರಳ ಸಬ್ ಏರಿಯಾ ಕಮಾಂಡರ್ ಮೇಜರ್ ಜನರಲ್ ಕೆ.ಎಸ್ ನಿಜ್ಜರ್ ಹಾಗೂ ಬ್ರಿಗೇಡಿಯರ್ ಆರ್.ಕೆ ಸಚಿದೇವಾ ಉಪಸ್ಥಿತರಿದ್ದರು.

  

ಸೇನಾ ಆಸ್ಪತ್ರೆಗಳಲ್ಲಿ ವಿಶೇಷ ವಿಭಾಗ : ಮಾಜಿ ಯೋಧರ ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಗಳ ಉನ್ನತೀಕರಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಹೃದಯಕ್ಕೆ ಮತ್ತು ಹಲ್ಲಿಗೆ ಸಂಬಂಧಿಸಿದ ವಿಶೇಷ ವಿಭಾಗವನ್ನು ಸೇನಾ ಆಸ್ಪತ್ರೆಗಳಲ್ಲಿ ತೆರೆಯಲಾಗಿದ್ದು, ಅವುಗಳನ್ನು ಹಂತ ಹಂತವಾಗಿ ಕೆಳಸ್ತರದ ಸೇನಾ ಆಸ್ಪತ್ರೆಗಳಿಗೂ ವಿಸ್ತರಿಸಲಾಗುವುದೆಂದು ದಲ್ಬೀರ್ ಸಿಂಗ್ ತಿಳಿಸಿದರು. ಕೆಲವೊಂದು ಆಡಳಿತಾತ್ಮಕ ಮತ್ತು ತಾಂತ್ರಿಕ ತೊಡಕುಗಳನ್ನು ತಾನು ಕಂಡುಕೊಂಡಿದ್ದು, ಇವುಗಳನ್ನು ನಿವಾರಿಸುವ ದೃಷ್ಟಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಒನ್ ರ್ಯಾಂಕ್ ಒನ್ ಪೆನ್ಶನ್ ಬಗ್ಗೆ ಸಾಕಷ್ಟು ಗೊಂದಲಗಳಿದ್ದು, ಸರಕಾರ ಮತ್ತು ಸೇನೆಯ ನಡುವೆ ಮಾತುಕತೆ ನಡೆಯುತ್ತಿದೆ ಎಂದು ದಲ್ಬೀರ್ ಸಿಂಗ್ ಸುಹಾಗ್ ಹೇಳಿದರು. ಮ್ಯೂಸಿಯಂಗೆ ಯುದ್ಧ ಟ್ಯಾಂಕರ್ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಯುದ್ಧ ಟ್ಯಾಂಕರ್ ಕೊಡಲು ಸಿದ್ಧವಿದ್ದು, ರಸ್ತೆ ಮಾರ್ಗದ ಮೂಲಕ ಸಾಗಿಸಲು ಕಷ್ಟವಾದಲ್ಲಿ ಕ್ಯಾರಿಯರ್ಸ್‌ ಅಥವಾ ಸೇನಾ ಸರಕು ಸರಂಜಾಮು ಸಾಗಾಟ ವಾಹನವನ್ನು ನೀಡುವುದಾಗಿ ಭರವಸೆ ನೀಡಿದರು.

ಸಮಸ್ಯೆಗಳನ್ನು ಬಿಚ್ಚಿಟ್ಟ ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ.ಸಿ. ನಂದ

ಜಿಲ್ಲೆಯಲ್ಲಿ ಸೇನಾ ನೇಮಕಾತಿ ರ್ಯಾಲಿ ಬಹಳ ವರ್ಷಗಳಿಂದ ನಡೆದಿಲ್ಲ. ಇಲ್ಲಿನ ಸೇನಾ ಆಸ್ಪತ್ರೆಯ ಸೌಲಭ್ಯಗಳನ್ನು ವಿಸ್ತರಿಸುವ ಕೆಲಸವಾಗಬೇಕು. ಸೂಕ್ತ ಔಷಧಗಳಿಲ್ಲ ಎಂಬ ದೂರು ವ್ಯಾಪಕವಾಗಿದೆ. ಹಾಗೆಯೆ ಸೇನಾ ಕ್ಯಾಂಟೀನ್ ಮಡಿಕೇರಿಯಲ್ಲಿ ಮೇಲ್ದರ್ಜೆಗೆ ಏರಿಸುವ ಜೊತೆಗೆ ದಕ್ಷಿಣ ಕೊಡಗಿನಲ್ಲಿ ಸೇನಾ ಕ್ಯಾಂಟಿನ್ ತೆರೆಯುವಂತೆ ಆಗಬೇಕು. ಕೊಡಗಿನ ಸೈನಿಕ ಶಾಲೆಯಿಂದ ಇಲ್ಲಿಯವರೆಗೆ ಕೊಡಗಿನಿಂದ ಕೇವಲ ಮೂವರು ಮತ್ತು ಉತ್ತರ ಕರ್ನಾಟಕ ವ್ಯಾಪ್ತಿಯಿಂದ ಇಬ್ಬರು ಸೇನಾ ಸೇವೆಗೆ ಸೇರಿದ್ದಾರೆ ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ.ಸಿ. ನಂದ ಹೇಳಿದರು.

 ಲೆಫ್ಟಿನೆಂಟ್ ಜನರಲ್ ಬಿ.ಸಿ. ನಂದ ಅವರ ಮನವಿಗೆ ತಕ್ಷಣ ಸ್ಪಂದಿಸಿದ ಜನರಲ್ ಸುಹಾಗ್, ಇಸಿಎಚ್‌ಎಸ್ ಆಸ್ಪತ್ರೆ, ಕ್ಯಾಂಟೀನ್, ಸೈನಿಕ ಶಾಲೆಗಳ ಕುಂದು ಕೊರತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದಾಗಿ ಭರವಸೆ ನೀಡಿದರು. ಕೊಡಗಿನ ಸೈನಿಕ ಶಾಲೆಗೆ ಸಂಬಂಧಿಸಿದಂತೆ ಇಂದು ತಮ್ಮನ್ನು ಭೇಟಿಯಾದ ಸೈನಿಕ ಶಾಲೆಯ ಪ್ರಾಂಶುಪಾಲರು ಮತ್ತು ಮೂವತ್ತು ಮಕ್ಕಳೊಂದಿಗೆ ತಾನು ಸಂವಾದ ನಡೆಸಿದ್ದು, ಸೇನಾ ವತಿಯಿಂದ ಅವರನ್ನು ಸೇನಾ ಸೇವೆಗೆ ಸೇರುವಂತೆ ಪ್ರೋತ್ಸಾಹಿಸಿರುವುದಾಗಿ ತಿಳಿಸಿದರು.

ಸೈನಿಕ ಕಲ್ಯಾಣ ಮತ್ತು ಪುನರ್ವವಸತಿ ಕಲ್ಯಾಣ ಇಲಾಖೆಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಜಿಲ್ಲಾಡಳಿತದ ವತಿಯಿಂದ ತೆಗೆದುಕೊಳ್ಳಲಾದ ಕಾರ್ಯಕ್ರಮಗಳನ್ನು ವಿವರಿಸಿದರು.

ಜನರಲ್ ದಲ್ಬೀರ್ ಸಿಂಗ್, ಸೇನಾ ಪತ್ನಿಯರ ಕಲ್ಯಾಣ ಸಂಘದ ಅಧ್ಯಕ್ಷೆ ನಮಿತಾ ಸುಹಾಗ್ ಹಾಗೂ ಸಂಘದ ಪ್ರಾದೇಶಿಕ ಅಧ್ಯಕ್ಷೆ ಮಧುಲಿಕಾ ರಾವತ್ ಅವರು ವೀರನಾರಿಯರನ್ನು ಸನ್ಮಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News