×
Ad

ಶಿವಮೊಗ್ಗ: ನಿವೇಶನ ಪಡೆಯಲು ರೈತರ ಪರದಾಟ

Update: 2016-08-06 22:21 IST

ಶಿವಮೊಗ್ಗ, ಆ.6: ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ (ಸೂಡಾ)ದಿಂದ ನಗರದ ಹೊರವಲಯ ಮಲ್ಲಿಗೇನಹಳ್ಳಿಯಲ್ಲಿ ರೈತರ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿರುವ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಗೆ ಸಂಬಂಧಿಸಿದಂತೆ, ರೈತರು ಎದುರಿಸುತ್ತಿರುವ ಸಮಸ್ಯೆಗೆ ಬೆಂಗಳೂರಿನಲ್ಲಿ ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ. ಶನಿವಾರ ವಿನೋಬನಗರ ಬಡಾವಣೆಯಲ್ಲಿರುವ ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಿ ಸಭೆ ನಡೆಸಿದ ಅವರು ಈ ಕುರಿತು ಮಾತನಾಡಿದರು. ಈ ಹಿಂದಿನ ಆಡಳಿತಾವಧಿಯ ವೇಳೆ ಈ ಬಡಾವಣೆಯಲ್ಲಿ ನಿವೇಶನ ಹಂಚಿಕೆಯಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಬಡಾವಣೆಯಲ್ಲಿ ನಿವೇಶನ ಪರಭಾರೆ, ಹಂಚಿಕೆ ಪ್ರಕ್ರಿಯೆ ಮೇಲೆ ನಿರ್ಬಂಧ ವಿಧಿಸಲಾಗಿದೆ. ಆದರೆ, ಬಡಾವಣೆ ರಚನೆಗೆ ಜಮೀನು ನೀಡಿದ ರೈತರ ನಿವೇಶನಗಳ ಪರಭಾರೆಗೂ ನಿರ್ಬಂಧ ಹಾಕಲಾಗಿದೆ. ಇದರಿಂದ ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಸಭೆೆಯಲ್ಲಿ ಸಚಿವರ ಗಮನ ಸೆಳೆಯಲಾಯಿತು. ರೈತರಿಗೆ ತೊಂದರೆಯಾಗದಂತೆ ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗುವುದುಎಂದು ಸಚಿವರು ಭರವಸೆ ನೀಡಿದರು. ನಿವೇಶನ ಹಂಚಿ: ನಗರ ವ್ಯಾಪ್ತಿಯಲ್ಲಿರುವ ವಸತಿ ರಹಿತರಿಗೆ ರಿಯಾಯಿತಿ ದರದಲ್ಲಿ ನಿವೇಶನ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಪ್ರಾಧಿಕಾರವು ಕಾಲಮಿತಿಯೊಳಗೆ, ಹೆಚ್ಚಿನ ಸಂಖ್ಯೆಯಲ್ಲಿ ನಿವೇಶನ ಹಂಚಿಕೆ ಮಾಡಬೇಕು. ಇದರಿಂದ ಸರಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ. ಈ ನಿಟ್ಟಿನಲ್ಲಿ ವಿಳಂಬಕ್ಕೆ ಆಸ್ಪದವಾಗದಂತೆ ಕಾರ್ಯನಿರ್ವಹಣೆ ಮಾಡುವಂತೆ ಸಚಿವರು ಸೂಚಿಸಿದರು. ಭೂ ಮಾಲಕರ ವಿಶ್ವಾಸ ಪಡೆದು ಸಹಭಾಗಿತ್ವದ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ಬಡಾವಣೆಗಳ ಅಭಿವೃದ್ಧಿಪಡಿಸಿ. ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮಟ್ಟದಲ್ಲಿ ಆಗಬೇಕಾದ ಕೆಲಸ ಕಾರ್ಯಗಳ ಬಗ್ಗೆ ತಾನು ಗಮನಹರಿಸುತ್ತೇನೆ. ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ನನೆಗುದಿಗೆ ಬಿದ್ದಿರುವ ಕೆಲಸ ಕಾರ್ಯಗಳ ಬಗ್ಗೆ ಸವಿವರವಾದ ಮಾಹಿತಿ ತಮಗೆ ಕಳುಹಿಸಿಕೊಡುವಂತೆ ಸೂಚಿಸಿದರು. ಇದೇ ವೇಳೆ ಆಯುಕ್ತ ಮೂಕಪ್ಪ ಎಂ. ಕರಭೀ ಮಣ್ಣವರ್‌ಪ್ರಾಧಿಕಾರದ ವತಿಯಿಂದ ಕೈಗೆತ್ತಿಕೊಳ್ಳಲಾಗಿರುವ ಅಭಿವೃದ್ಧ್ದಿ ಕಾರ್ಯಕ್ರಮಗಳ ಸಮಗ್ರ ವಿವರ ನೀಡಿದರು. ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರರು ಸೋಮಿನಕೊಪ್ಪ ಕೆರೆ ಅಭಿವೃದ್ಧ್ದಿಯ ಬಗ್ಗೆ ವಿವರಣೆ ನೀಡಿದರು. ಈ ಸಂದಭರ್ದಲ್ಲಿ ವಿಧಾನಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ.ಶ್ರೀನಿವಾಸ್, ಪ್ರಾಧಿಕಾರದ ಟಿಪಿಎಂ ವಾಸುದೇವ್, ಕಾರ್ಪೂರೆಟರ್ ರಘು, ಮುಖಂಡರಾದ ವೈ.ಎಚ್.ನಾಗರಾಜ್, ಶಶಿಧರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News