ಶಿಕಾರಿಪುರ: ಬೀಳ್ಕೊಡುಗೆ ಕಾರ್ಯಕ್ರಮ
ು ಶಿಕಾರಿಪುರ, ಆ.6: ವೃತ್ತಿ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗದೆ,ವೈಯಕ್ತಿಕವಾಗಿ ವೀಕ್ಷಿಸಿ ಗ್ರಹಿಸುವ ಶಕ್ತಿಯ ಮೂಲಕ ಅರಿಯುವ ಸ್ವಂತಿಕೆಯನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಇಲ್ಲಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಅರವಳಿಕೆ ತಜ್ಞ ಡಾ.ಸುರೇಶ್ ಬಾಳೆಕೊಪ್ಪ ತಿಳಿಸಿದ್ದಾರೆ.
ಶನಿವಾರ ಇಲ್ಲಿನ ಬಾಪೂಜಿ ಪ್ಯಾರಾಮೆಡಿಕಲ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನಡೆದ ಸ್ವಾಗತ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು.
ಪ್ಯಾರಾಮೆಡಿಕಲ್ ಶಿಕ್ಷಣ ಜನತೆಗೆ ನೇರವಾಗಿ ಸೇವೆ ಸಲ್ಲಿಸುವ ಬಹು ಮಹತ್ತರವಾದ ಅವಕಾಶವನ್ನು ಕಲ್ಪಿಸಿದೆ ಎಂದ ಅವರು ಪ್ರತಿಜ್ಞಾ ವಿಧಿಯ ಮೂಲಕ ವಿದ್ಯಾರ್ಥಿಗಳು ಶಿಕ್ಷಣದ ನಂತರದಲ್ಲಿ ಇದೇ ರೀತಿಯಂತೆ ಸೇವೆ ಸಲ್ಲಿಸುವ ಸಂಕಲ್ಪವನ್ನು ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.
ವೃತ್ತಿ ಶಿಕ್ಷಣಕ್ಕೆ ದಾಖಲಾದ ನಂತರದಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗದೆ ವೀಕ್ಷಿಸಿ ಅರಿಯುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದ ಅವರು, ವೃತ್ತಿ ಶಿಕ್ಷಣದಲ್ಲಿ ಉಪನ್ಯಾಸಕರ ಬೋಧನೆ ಪಠ್ಯಕ್ಕೆ ಮಾತ್ರ ಸೀಮಿತವಾಗಿದ್ದು ಇದರಿಂದ ಪೂರ್ಣಗೊಳಿಸಲಾಗುವುದಿಲ್ಲ ಎಂಬುದನ್ನು ಅರಿತು ಶಿಕ್ಷಣಕ್ಕೆ ಸಂಬಂಧಿಸಿದ ನವೀನತೆಯನ್ನು ಗ್ರಹಿಸುವ ಶಕ್ತಿಯನ್ನು ಹೊಂದುವಂತೆ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಗ್ರಾಮಾಂತರ ಪಿಎಸ್ಸೈ ಚಂದ್ರಶೇಖರ ಮಾತನಾಡಿ,ವೃತ್ತಿ ಶಿಕ್ಷಣದಿಂದ ವ್ಯಕ್ತಿ ಭವಿಷ್ಯದ ಜೀವನವನ್ನು ರೂಪಿಸಿಕೊಳ್ಳಬಹುದಾಗಿದೆ ಎಂದರು. ಪ್ರತಿಜ್ಞಾ ವಿಧಿಯ ಮೂಲಕ ವಿದ್ಯಾರ್ಥಿಗಳು ವೃತ್ತಿ ಬದುಕಿನ ಬಗ್ಗೆ ಸ್ಪಷ್ಟ ಗುರಿ,ಕಲ್ಪನೆಯನ್ನು ಹೊಂದುವಂತೆ ತಿಳಿಸಿ ಬಾನೆತ್ತರದ ಗುರಿಯನ್ನು ಹೊಂದಿದಲ್ಲಿ ಅಲ್ಪವನ್ನು ಸಾಧಿಸಲು ಸಾಧ್ಯ. ಗುರಿಯಿಲ್ಲದಿದ್ದಲ್ಲಿ ಸಾಧನೆ ಅಸಾಧ್ಯ ಎಂದು ತಿಳಿಸಿದರು.
ಉದ್ಯೋಗಾವಕಾಶಗಳು ವಿಪುಲವಾಗಿರುವ ಪ್ಯಾರಾಮೆಡಿಕಲ್ ಶಿಕ್ಷಣಕ್ಕೆ ದಾಖಲಾಗುವ ವಿದ್ಯಾರ್ಥಿಗಳು ಶ್ರದ್ಧೆ ,ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದ ಅವರು, ಜನತೆಯ ಜೀವ ಕಾಪಾಡುವ ವೃತ್ತಿಯಲ್ಲಿ ನೆಮ್ಮದಿಯ ಸಂತೃಪ್ತಿಯ ಜೀವನವನ್ನು ಕಾಣಬಹುದಾಗಿದೆ ಎಂದರು. ನಂತರ ಕಾನೂನು ಮಾಹಿತಿಯ ಸಂಕ್ಷಿಪ್ತ ಕೈಪಿಡಿಯನ್ನು ಸಂಸ್ಥೆಗೆ ನೀಡಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪಾಪಯ್ಯ ವಹಿಸಿ ಮಾತನಾಡಿದರು.ಪಟ್ಟಣ ಠಾಣೆ ಪಿಎಸ್ಸೈ ಶಾಂತಮ್ಮ, ಬಿಇಒ ಸಿದ್ದಲಿಂಗಪ್ಪ,ವೈದ್ಯ ಡಾ.ಬಸವರಾಜ ಕುಲಾಲ್,ರಾಜ್ಯ ಸರಕಾರಿ ನೌಕರರ ಸಂಘದ ತಾ.ಘಟಕದ ಅಧ್ಯಕ್ಷ ಚಿನ್ನಪ್ಪ, ಸಿಡಿಪಿಒ ಚಿದಾನಂದ, ರತ್ನಮ್ಮ,ರಾಘವೇಂದ್ರ ಕುಲಕರ್ಣಿ, ಉಮಾಪತಿ, ಅನ್ನಪೂರ್ಣ ಮತ್ತಿತರರು ಉಪಸ್ಥಿತರಿದ್ದರು.