×
Ad

ದೇವರಾಜ ಅರಸು ವ್ಯಕ್ತಿತ್ವ ಕೊಂಡಾಡಿದ ಗಣ್ಯ ರು

Update: 2016-08-06 22:24 IST

ಶಿವಮೊಗ್ಗ, ಆ.6: ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಡಿ. ದೇವರಾಜ ಅರಸು ಜನ್ಮ ಶತಮಾನೋತ್ಸವ ಅಂಗವಾಗಿ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಗಣ್ಯರು ದೇವರಾಜ ಅರಸುರವರ ವ್ಯಕ್ತಿತ್ವದ ಗುಣಗಾನ ಮಾಡಿದರು. ವಿಚಾರ ಸಂಕಿರಣಕ್ಕೆ ಚಾಲನೆ ನೀಡಿದ ನಂತರ ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರು ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಹೋರಾಟದ ಮೂಲಕವೇ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಜೀವನ ಸಂತೃಪ್ತಿ ಕಂಡಿದ್ದರು. ಈ ರಾಜ್ಯ ಕಂಡ ಧೀಮಂತ ಮುತ್ಸದ್ದಿಗಳಲ್ಲಿ ಅವರೂ ಒಬ್ಬರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಗೇಣಿ ಜಮೀನು ಹೋರಾಟ ಅರಸುಅವರ ಜೀವನದಲ್ಲಿ ಮಹತ್ತರ ಪಾತ್ರ ವಹಿಸಿತು. ಜೊತೆಗೆ ಸಾಮಾಜಿಕ ನ್ಯಾಯವನ್ನು ಹಿಂದುಳಿದ ವರ್ಗದವರಿಗೆ ಮತ್ತು ಶೋಷಿತರಿಗೆ ನೀಡುವ ಮೂಲಕ ಆ ವರ್ಗಗಳ ಹರಿಕಾರರಾಗಿ ಇತಿಹಾಸದ ಪುಟಗಳಲ್ಲಿ ದಾಖಲಾದರು. ಭೂ ಸುಧಾರಣೆ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಮೂಲಕ ಸಮಾಜದಲ್ಲಿ ಅವರು ತೀವ್ರ ತರದ ಬದಲಾವಣೆಯನ್ನು ತಂದರು. ಮಹಿಳೆಯರಿಗೆ ಇಂದು ಶೇ. 50 ರಷ್ಟು ಮೀಸಲಾತಿ ಸಿಕ್ಕಿದ್ದರೆ ಅದರ ಮೂಲ ಪುರುಷ ಅರಸು ಅವರಾಗಿದ್ದಾರೆ. ಆದರೆ ಸಮಾಜ ಇಂದು ಮೀಸಲಾತಿಯನ್ನು ಕಸಿದುಕೊಳ್ಳಲು ಯತ್ನಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಲೋಕಸಭಾ ಸದಸ್ಯ ಬಿ.ಎಸ್.ಯಡಿಯೂರಪ್ಪರವರು ಮಾತನಾಡಿ, ಅರಸು ಜನ್ಮ ಶತಮಾನೋತ್ಸವವನ್ನು ಪ್ರತಿ ಗ್ರಾಮಮಟ್ಟದಲ್ಲಿ ಆಚರಿಸಬೇಕು. ಹಾಗೆಯೇ ಶಾಲಾ, ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿಯೂ ಆಚರಿಸುವ ಮೂಲಕ ಜನಸಾಮಾನ್ಯರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಅರಸು ವಿಚಾರ ಧಾರೆಗಳನ್ನು ಬಿತ್ತುವ ಕೆಲಸ ಮಾಡಬೇಕಾಗಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಶತಮಾನೋತ್ಸವ ಸಮಿತಿಯ ಕಾರ್ಯಕಾರಿ ಸದಸ್ಯ ಎಸ್.ವಿ. ಅಮಿನ್, ವರ್ಷವಿಡೀ ಅರಸು ವಿಚಾರಧಾರೆಗಳನ್ನು ರಾಜ್ಯದಾದ್ಯಂತ ಪಸರಿಸುವ ಕೆಲಸವನ್ನು ಸಮಿತಿ ಮಾಡುತ್ತಿದೆ. ಅರಸು ಅವರ ಜನ್ಮ ಸ್ಥಳ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ ಈ ಕಾರ್ಯಕ್ರಮವನ್ನು ಉದ್ಘಾಟಿಸಲಾಗಿದ್ದು, ಇದೇ ತಿಂಗಳ ಅಂತ್ಯಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಮಾರೋಪಗೊಳ್ಳಲಿದೆ. ಈಗಾಗಲೇ ಹುಬ್ಬಳ್ಳಿ, ಕಲಬುರಗಿಯಲ್ಲಿ ರಾಜ್ಯಮಟ್ಟದ ಎರಡು ವಿಚಾರ ಸಂಕಿರಣಗಳನ್ನು ನಡೆಸಲಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಶಾ ಕ ಆರ್. ಪ್ರಸನ್ನಕುಮಾರ್, ಜಿಪಂ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಕಾಡಾ ಅಧ್ಯಕ್ಷ ನಗರದ ಮಹದೇವಪ್ಪ, ಶತಮಾನೋತ್ಸವ ಸಮಿತಿ ಸದಸ್ಯ ಹಾಗೂ ಎಂಎಲ್ಸಿ ಎಚ್.ಎಂ. ರೇವಣ್ಣ, ಡಿಸಿ ವಿ.ಪಿ. ಇಕ್ಕೇರಿ, ಕೆ. ಚನ್ನಬಸಪ್ಪ, ಮತ್ತಿರರು ಉಪಸ್ಥಿತರಿದ್ದರು.

 ಕನಸು ನನಸಾಗಲು ಸಾಧ್ಯ: ಕಾಗೋಡು ಸಾಮಾಜಿಕ ನ್ಯಾಯವನ್ನು ಮುಕ್ತಮನಸ್ಸಿನಿಂದ ನೀಡಿದ ಕೀರ್ತಿ ಅರಸು ಅವರದ್ದು. ಸಮಾಜದಲ್ಲಿ ಸಾಮಾಜಿಕ ನ್ಯಾಯ ಇನ್ನೂ ಸಿಗದ ಜನಾಂಗಗಳಿವೆ. ಸಮಾಜ ಬೆಳೆದಂತೆ ಭ್ರಮೆಗಳು ಹೆಚ್ಚಾಗುತ್ತಿರುವುದರಿಂದ ಅದನ್ನು ಬಿಟ್ಟು ಬದುಕಲು ಜನರು ಮುಂದೆ ಬರಬೇಕು. ತುಳಿತಕ್ಕೊಳಗಾದ ಜನಾಂಗದವರು ಇನ್ನೂ ಅದೇ ಮಾದರಿಯಲ್ಲಿ ಬದುಕುವುದರಿಂದ ಹೊರ ಬರಬೇಕು. ಗ್ರಾಮಗಳಲ್ಲಿ ವಿಚಾರಶೀಲತೆ ಬೆಳೆಯಬೇಕು. ಅಂದಾಗ ಮಾತ್ರ ಅಭಿವೃದ್ಧಿಯಲ್ಲಿ ಕಲ್ಪನೆ ಮತ್ತು ಅರಸು ಅವರ ಕನಸು ನನಸಾಗಲು ಸಾಧ್ಯ ಎಂದು ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News