ರಾಜಧಾನಿಯಲ್ಲಿ ಪೊಲೀಸ್ ಭದ್ರತೆಯಲ್ಲಿ ಜೆಸಿಬಿಗಳ ಘರ್ಜನೆ
ಬೆಂಗಳೂರು, ಆ.6: ರಾಜ್ಯ ಸರಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬೊಮ್ಮನಹಳ್ಳಿ, ಯಲಹಂಕ ಹಾಗೂ ಮಹದೇವಪುರ ವಲಯಗಳಲ್ಲಿ ಒತ್ತುವರಿಯಾಗಿರುವ ರಾಜಕಾಲುವೆಗಳನ್ನು ಬಿಗಿ ಪೊಲೀಸ್ ಭದ್ರತೆಯ ನಡುವೆ ತೆರವುಗೊಳಿಸುವ ಕಾರ್ಯಾಚರಣೆಯನ್ನು ರವಿವಾರ ಬೆಳಗ್ಗೆ ಕೈಗೊಳ್ಳಲಾಗಿತ್ತು.
ನಗರದಲ್ಲಿ ಇತ್ತೀಚೆಗೆ ಬಿದ್ದಂತಹ ಧಾರಾಕಾರ ಮಳೆಯಿಂದಾಗಿ ಕೋಡಿಚಿಕ್ಕನಹಳ್ಳಿ, ಸಾರಕ್ಕಿ ಕೆರೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳು ಜಲಾವೃತಗೊಂಡು ಜನ ಸಾಮಾನ್ಯರು ಸಂಕಷ್ಟ ಅನುಭವಿಸಿದ್ದರು. ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಿಕೊಂಡ ಪರಿಣಾಮ ಮಳೆ ನೀರು ಸರಾಗವಾಗಿ ಹರಿಯದೆ ತಗ್ಗುಪ್ರದೇಶದ ಮನೆಗಳು, ಅಪಾರ್ಟ್‌ಮೆಂಟ್‌ಗಳಿಗೆ ನೀರು ನುಗ್ಗಿ ರಸ್ತೆಯೆಲ್ಲ ಕೆರೆಯಂತಾಗಿತ್ತು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗಷ್ಟೇ ಬಿಬಿಎಂಪಿ, ಬಿಡಿಎ, ಬೆಂಗಳೂರು ಜಲಮಂಡಳಿ ಹಾಗೂ ಬಿಎಂಟಿಎಫ್ ಅಧಿಕಾರಿಗಳ ಸಭೆ ನಡೆಸಿ ಮುಲಾಜಿಲ್ಲದೆ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸಿ ಎಂದು ಕಟ್ಟುನಿಟ್ಟಿನ ಆದೇಶ ನೀಡಿದ್ದರು. ಇದರಿಂದಾಗಿ, ಕಾರ್ಯಪ್ರವೃತ್ತರಾದ ಬಿಬಿಎಂಪಿ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆಗೆ ಚಾಲನೆ ನೀಡಿದರು.
ಬೊಮ್ಮನಹಳ್ಳಿ ವಲಯದ ಅವನಿಶೃಂಗೇರಿನಗರದಲ್ಲಿ ರಾಜಕಾಲುವೆ ಮೇಲೆ ನಿರ್ಮಿಸಿದ್ದ 9 ಕಟ್ಟಡಗಳನ್ನು ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತ ಮುನಿವೀರಪ್ಪ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯರು ಹಾಗೂ ಬಿಬಿಎಂಪಿ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಮಹದೇವಪುರ ವಲಯದ ಕಸವನಹಳ್ಳಿ ಹಾಗೂ ಕೈಕೊಂಡ್ರಹಳ್ಳಿ ಕೆರೆಗಳ ನಡುವೆ ಹಾದುಹೋಗಿರುವ ಸುಮಾರು 1 ಎಕರೆ ಪ್ರದೇಶದ ರಾಜಕಾಲುವೆ ತೆರವುಗೊಳಿಸಿ ಸರಕಾರದ ವಶಕ್ಕೆ ಪಡೆಯಲಾಗಿದೆ. ರಾಜಕಾಲುವೆ ಒತ್ತುವರಿ ಮಾಡಿಕೊಂಡು ನಿರ್ಮಿಸಿಕೊಂಡಿದ್ದ ಕಟ್ಟಡಗಳು, ಕಾಂಪೌಂಡ್ ಹಾಕಿದ್ದ ನಿವೇಶನಗಳು, ಪಾರ್ಕಿಂಗ್ ಶೆಡ್‌ಗಳು, ಉದ್ಯಾನವನಗಳನ್ನು ಬಿಬಿಎಂಪಿ ಅಧಿಕಾರಿಗಳು ಪೊಲೀಸ್ ಬಿಗಿ ಭದ್ರತೆಯಲ್ಲಿ ತೆರವುಗೊಳಿಸಲಾಯಿತು.
ಯಲಹಂಕ ವಲಯದ ಸಹಕಾರನಗರ, ಕೊಡಿಗೆಹಳ್ಳಿ, ವಿದ್ಯಾರಣ್ಯಪುರ, ಪುಟ್ಟೇನಹಳ್ಳಿ, ಹೆಣ್ಣೂರು, ಅಗ್ರಹಾರ ಲೇಔಟ್ ಹಾಗೂ ಜಕ್ಕೂರಿನಲ್ಲಿ ಕಾರ್ಯಾಚರಣೆ ನಡೆಸಿ ರಾಜಕಾಲುವೆ ಒತ್ತುವರಿ ತೆರವುಗೊಳಿಸಲಾಯಿತು. ಜಕ್ಕೂರಿನಲ್ಲಿ ರೇಡಿಯಂಟ್ ಜಾಸ್ಮಿನ್ ಗಾರ್ಡನ್, ಸುರಭಿಲೇಔಟ್‌ನಲ್ಲಿ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್, ಅಗ್ರಹಾರ ಲೇಔಟ್‌ನಲ್ಲಿ ಆದಿತ್ಯ ಕಾಲೇಜು ಹಾಗೂ ಹೆಣ್ಣೂರಿನಲ್ಲಿ ಎರಡು ಖಾಸಗಿ ಕಟ್ಟಡಗಳಿಂದ ಆಗಿದ್ದ ಒತ್ತುವರಿಯನ್ನು ತೆರವುಗೊಳಿಸಿದರು.
ಕಳೆದ ವರ್ಷ ಮಳೆ ಬಂದ ಸಂದರ್ಭದಲ್ಲಿ ರಾಜಕಾಲುವೆ ಒತ್ತುವರಿಯಿಂದಾಗಿ ಸುರಭಿಲೇಔಟ್ ಜಲಾವೃತಗೊಂಡು ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗಿತ್ತು. ಈ ಬಾರಿ ಸಾರಕ್ಕಿ ಬಡಾವಣೆಯಲ್ಲಿ ಆದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ಮರುಕಳಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಬಿಬಿಬಿಂಪಿ ವಲಯ ಆಯುಕ್ತ ಸರ್ಫ್ರಾಝ್‌ಖಾನ್ ತಿಳಿಸಿದರು.
ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು. ಇಂದಿನ ಕಾರ್ಯಾಚರಣೆಯಲ್ಲಿ ಸುಮಾರು 280 ಕೋಟಿ ರೂ.ವೌಲ್ಯದ ಆಸ್ತಿಯನ್ನು ತೆರವುಗೊಳಿಸಲಾಗಿದೆ ಎಂದು ಅವರು ಹೇಳಿದರು.
ಆಯುಕ್ತರಿಗೆ ೇರಾವ್: ಬೊಮ್ಮನಹಳ್ಳಿಯ ಅವನೀಶೃಂಗೇರಿ ನಗರದಲ್ಲಿ ಮನೆಗಳು ಹಾಗೂ ಕಟ್ಟಡಗಳನ್ನು ಕಳೆದುಕೊಂಡವರು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ಗೆ ೇರಾವ್ ಹಾಕಿ, ಮನೆಗಳನ್ನು ಒಡೆಯದಂತೆ ದುಂಬಾಲು ಬಿದ್ದರು. ರಾಜಕಾಲುವೆಯನ್ನು ಒತ್ತುವರಿ ಮಾಡಿ ನಿವೇಶನ ರಚನೆ ಮಾಡಿರುವ ವಿಷಯ ನಮಗೆ ಗೊತ್ತಿರಲಿಲ್ಲ. ಮುಂಚಿತವಾಗಿಯೆ ಈ ವಿಷಯ ನಮಗೆ ಗೊತ್ತಿದ್ದರೆ ನಾವು ಮನೆಗಳನ್ನೆ ಕಟ್ಟುತ್ತಿರಲಿಲ್ಲ ಎಂದು ಸಂತ್ರಸ್ತರು ಮನವಿ ಮಾಡಿದರು.
ಒತ್ತುವರಿ ತೆರವು ಕಾರ್ಯಾ ಚರಣೆಯನ್ನು ಸ್ಥಗಿತಗೊಳಿಸುವ ಪ್ರಶ್ನೆಯೇ ಇಲ್ಲ. ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದಂತೆ ನಡೆದಿರುವ ಸರ್ವೇಯನ್ನು ಆಧಾರವಾಗಿಟ್ಟುಕೊಂಡು, ತೆರವುಗೊಳಿಸಲಾಗುತ್ತಿದೆ. ಇತ್ತೀಚೆಗಷ್ಟೇ ಮಳೆಯಿಂದ ಆದಂತಹ ಅವಾಂತರವನ್ನು ನಾವೆಲ್ಲ ನೋಡಿದ್ದೇವೆ. ಕೆಲವರು ಮಾಡಿರುವ ತಪ್ಪಿಗೆ ಸಾವಿರಾರು ಜನ ಸಂಕಷ್ಟಪಡುವಂತಾಗಿದೆ.
-ಬಿ.ಎನ್.ಮಂಜುನಾಥ ರೆಡ್ಡಿ, ಮೇಯರ್
ಬ್ಯಾಂಕ್‌ನಲ್ಲಿ ಸಾಲ ಪಡೆದು 15 ವರ್ಷಗಳ ಹಿಂದೆ ಮನೆಯನ್ನು ಕಟ್ಟಲಾಗಿದೆ. ಕಂದಾಯವನ್ನು ಪ್ರತಿವರ್ಷ ಕಟ್ಟುತ್ತಿದ್ದೇವೆ. ಮನೆಯು ‘ಎ’ ಖಾತೆಯನ್ನು ಹೊಂದಿದೆ. ನನ್ನ ಪತ್ನಿ ಗರ್ಭಿಣಿಯಾಗಿದ್ದು, ಮನೆಯಲ್ಲಿದ್ದ ವಸ್ತುಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಿಲ್ಲ. ಇದೀಗ ನಮಗೆ ದಿಕ್ಕು ತೋಚದಂತಾಗಿದೆ.
-ದಿಲೀಪ್, ಅವನೀಶೃಂಗೇರಿ ನಗರ ನಿವಾಸಿ
ರಾಜಕಾಲುವೆ ಒತ್ತುವರಿ ಮಾಡಿಕೊಂಡವರು ಅಮಾಯಕರಿಗೆ ನಿವೇಶನಗಳನ್ನು ಮಾರಾಟ ಮಾಡಿ ಹೋಗಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಅಮಾಯಕರು ಬಲಿಯಾಗಿದ್ದಾರೆ. ಮನೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಬಿಬಿಎಂಪಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು.
-ಸತೀಶ್‌ರೆಡ್ಡಿ, ಬೊಮ್ಮನಹಳ್ಳಿ ಶಾಸಕ