ಗುಜರಾತ್ ದಲಿತ ಚಳವಳಿಯಲ್ಲಿ ಮೂಡಿ ಬಂದ ಹೊಸ ನಾಯಕ ಜಿಗ್ನೇಶ್ ಮೇವಾನಿ

Update: 2016-08-07 04:05 GMT

ಅಹ್ಮದಾಬಾದ್, ಆ.7: ಸತ್ತ ಹಸುವಿನ ಚರ್ಮ ತೆಗೆಯುತ್ತಿದ್ದ ಅಮಾಯಕ ದಲಿತರ ಮೇಲೆ ಅಮಾನವೀಯ ಹಲ್ಲೆ ನಡೆಸಿದ ಗೋರಕ್ಷಕರ ಕೃತ್ಯದ ವಿರುದ್ಧ ಹುಟ್ಟಿಕೊಂಡ ಗುಜರಾತ್ ದಲಿತ ಚಳವಳಿ, ರಾಜ್ಯಕ್ಕೆ ಅಪೂರ್ವ ದಲಿತ ಹೋರಾಟಗಾರರೊಬ್ಬರನ್ನು ಪರಿಚಯಿಸಿದೆ.
ಈ ಶಿಕ್ಷಣ ತಜ್ಞ, ಹೋರಾಟಗಾರ, ಪ್ರಖರ ವಾಗ್ಮಿ ಜಿಗ್ನೇಶ್ ಮೇವಾನಿ ಈಗ ಇಡೀ ರಾಜ್ಯದಲ್ಲಿ ಮನೆಮಾತು. ಈ ಕನ್ನಡಕಧಾರಿ ಯುವ ವಕೀಲನ ಮಾತಿನ ಮೋಡಿಗೆ ಮರುಳಾಗದವರೇ ಇಲ್ಲ. ದಲಿತರ ಹಿತರಕ್ಷಣೆಗೆ ವಿಫಲವಾದ ಸರ್ಕಾರದ ಬಗ್ಗೆ ಈತ ಟೀಕಾಪ್ರಹಾರ ಹರಿಸಿದರೆ, ಕಿಕ್ಕಿರಿದ ಸಭಿಕರಿಂದ ಚಪ್ಪಾಳೆಗಳ ಸುರಿಮಳೆಯಾಗುತ್ತದೆ. ಕೂಲಿ ಕಾರ್ಮಿಕರಿಂದ ಹಿಡಿದು ದೊಡ್ಡ ಅಭಿಮಾನಿ ಸಮೂಹ ಇದೀಗ ಮೇವಾನಿ ಬೆನ್ನ ಹಿಂದೆ ಇದೆ.
35 ವರ್ಷದ ಈ ಹೋರಾಟಗಾರ ಪಶ್ಚಿಮ ರಾಜ್ಯಗಳಲ್ಲೆಲ್ಲ ಅಭಿಮಾನಿ, ಅನುಯಾಯಿಗಳನ್ನು ಹೊಂದಿದ್ದಾರೆ. ಇದೀಗ ಮೇವಾನಿ ಅಹ್ಮದಾಬಾದ್‌ನಿಂದ ಉನಾಗೆ ಪಾದಯಾತ್ರೆ ಹೊರಟಿದ್ದಾರೆ. ದಲಿತರ ಮೇಲೆ ಅಮಾನವೀಯ ಹಲ್ಲೆ ನಡೆಯುತ್ತಿರುವ ವೀಡಿಯೊವನ್ನು ಜುಲೈ 11ರಂದು ವೀಕ್ಷಿಸಿದ್ದೇ ತಡ ದಲಿತರ ಶಕ್ತಿ ಪ್ರದರ್ಶನಕ್ಕೆ ಮಹಾಸಭಾ ಆಯೋಜಿಸುವ ಸಂಕಲ್ಪ ತೊಟ್ಟರು. ಇದರ ಪರಿಣಾಮವೇ ಜುಲೈ 31ರಂದು ನಡೆದ ದಲಿತ ಮಹಾ ಸಮ್ಮೇಳನ. 20 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸಂಘಟಿಸಿದ ಹೆಗ್ಗಳಿಕೆ ಇವರದ್ದು.
ಉನಾ ದಲಿತ ಅತ್ಯಾಚಾರ ಲಾದತ್ ಸಮಿತಿಯ ನೇತೃತ್ವ ವಹಿಸಿ ದಲಿತ ಹಕ್ಕುಗಳಿಗಾಗಿ ಹೋರಾಡಲು ಮೇವಾನಿ ನಿರ್ಧರಿಸಿದ್ದಾರೆ. "ಬಹುತೇಕ ದಲಿತ ಚಿಂತಕರಿಗೆ ದಲಿತರ ಸಮಸ್ಯೆಗಳ ವಾಸ್ತವತೆ ಅರಿವು ಇರುವುದಿಲ್ಲ. ಈ ಅಂತರವನ್ನು ಕಡಿಮೆ ಮಾಡಿ ಚಿಂತಕರು ಹಾಗೂ ಹೋರಾಟಗಾರರನ್ನು ಜತೆ ತರುವುದು ನನ್ನ ಉದ್ದೇಶ" ಎಂದು ಮೇವಾನಿ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News