×
Ad

ಮಹಾದಾಯಿ ನದಿ ನೀರು ಹಂಚಿಕೆ ವಿವಾದ; ನಾರಿಮನ್ ಅವರೊಂದಿಗೆ ಆ.16ರಂದು ಸಭೆಯ ಬಳಿಕ ಮುಂದಿನ ಕ್ರಮ : ಸಿದ್ದರಾಮಯ್ಯ

Update: 2016-08-07 14:23 IST

ಬೆಂಗಳೂರು, ಆ.7: ಮಹಾದಾಯಿ ನದಿ ನೀರು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿಚಾರದಲ್ಲಿ ಹಿರಿಯ ವಕೀಲರಾದ ನಾರಿಮನ್ ಅವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸರ್ವಪಕ್ಷ ಸಭೆಯ ಬಳಿಕ ಸುದ್ದಿಗಾರರೊಂದಿಗೆ  ಮಾತನಾಡಿದ ಸಿದ್ದರಾಮಯ್ಯ ಅವರು ನಾರಿಮನ್‌  ತಂಡದ ಮೇಲೆ ಎಲ್ಲರಿಗೂ ವಿಶ್ವಾಸವಿದೆ. ಆ.16ರಂದು ನಾರಿಮನ್‌ ಅವರೊಂದಿಗೆ  ಈ ವಿಚಾರದಲ್ಲಿ ಸಭೆ ನಡೆಸಲಾಗುವುದು ಎಂದರು. .
 ಅಂತಾರಾಜ್ಯ ನದಿ ವಿವಾದ ಕಾಯ್ದೆ  ಅಡಿ ಸ್ಪಷ್ಟನೆ ಕೇಳುವುದು ಮತ್ತು  ಸುಪ್ರೀಂ ಕೋರ್ಟ್‌‌ನಲ್ಲಿ ಎಸ್ಎಲ್‌ಪಿ ಹಾಕುವ  ವಿಚಾರಗಳ ಬಗ್ಗೆ ಸರ್ವ ಪಕ್ಷ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು  ಮಾಹಿತಿ ನೀಡಿದ ಸಿದ್ದರಾಮಯ್ಯ ಅವರು ನೆಲಜಲ ವಿಷಯದಲ್ಲಿ ತಾನು ಯಾವುದೇ ರಾಜಕೀಯ ಮಾಡಿಲ್ಲ ಎಂದರು.
ಮಹಾದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿ ರಾಜ್ಯದ ಎಲ್ಲ ಪಕ್ಷದ ಮುಖಂಡರು ಒಗ್ಗಟ್ಟಾಗಿದ್ದಾರೆ. ಎಂದು ಮಾಜಿ ಮುಖ್ಯ ಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿ ಹೇಳಿದ್ದಾರೆ. ವಿವಾದ ಬಗೆಹರಿಸಲು ಪ್ರಧಾನಿ ಮೋದಿ ಮಧ್ಯಪ್ರವೇಶಿಸಬೇಕೆಂಬ ಆಗ್ರಹಕ್ಕೆ ಸಂಬಂಧಿ ಮಾತನಾಡಿದ  ಅವರು" ಪ್ರಧಾನ ಮಂತ್ರಿ ನರೇಂದ್ರ ಮೋದಿ  ಮಧ್ಯ ಪ್ರವೇಶದಿಂದ ಸಮಸ್ಯೆ ಬಗೆ ಹರಿಯದು. ಮುಂದಿನ ವರ್ಷ ಗೋವಾದಲ್ಲಿ  ವಿಧಾನಸಭೆಗೆ ಚುನಾವಣೆ ಇರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಬಳಿಗೆ ತೆರಳಿದರೆ ಸಮಸ್ಯೆ ಬಗೆಹರಿಯದು” ಎಂದರು.
"ಮುಖ್ಯ ಮಂತ್ರಿಯವರ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ನಾಡಿನ ನೆಲಜಲ ವಿಚಾರದಲ್ಲಿ ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಮಹಾದಾಯಿ ಬಗ್ಗೆ ನ್ಯಾಯಾಧೀಕರಣದ ಮಧ್ಯಂತರ ತೀರ್ಪಿನ ಹಿನ್ನೆಲೆಯಲ್ಲಿ ಉಂಟಾಗಿರುವ ಅಹಿತಕರ ಘಟನೆಗೆ ಸಂಬಂಧಿಸಿ ಅಮಾಯಕರ ವಿರುದ್ಧ ಪ್ರಕರಣ ದಾಖಲಾಗಿರುವುದನ್ನು    ಹಿಂಪಡೆಯುವ ಬಗ್ಗೆ ಮುಖ್ಯ  ಮಂತ್ರಿ ಭರವಸೆ ನೀಡಿದ್ದಾರೆ.   ಈ ಸಂಬಂಧ   ರಾಘವೇಂದ್ರ ಔರಾದ್ಕರ‍್  ಅವರು ನೀಡುವ ವರದಿಯ ಬಗ್ಗೆ ಆ.10 ರಂದು ನಡೆಯುವ ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿರುವುದಾಗಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News