ಯುವ ಸಮೂಹ ರಾಷ್ಟ್ರದ ಅಭಿವೃದ್ಧಿಗೆ ಕೈಜೋಡಿಸಿ: ಶಂಸುದ್ದೀನ್
ಮಡಿಕೇರಿ, ಆ.7: ಪ್ರತಿಯೊಬ್ಬನು ತನ್ನ ಕುಟುಂಬದ ಜೊತೆಗೆ ಸಮಾಜ, ರಾಷ್ಟ್ರದ ಅಭಿವೃದ್ಧಿಗೂ ಕಾಳಜಿ ತೋರಬೇಕು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಉದ್ಯೋಗವನ್ನು ಪಡೆಯುವ ಮೂಲಕ ಸಮಾಜದ ಗೌರವಕ್ಕೂ ಪಾತ್ರರಾಗಬೇಕು ಎಂದು ಕೊಡಗು ಬ್ಯಾರೀಸ್ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷ ಬಿ.ಎ.ಶಂಸುದ್ದೀನ್ ಹೇಳಿದ್ದಾರೆ. ಕೂರ್ಗ್ ಎಜ್ಯುಕೇಶನ್ ಗೈಡೆನ್ಸ್ ಸೆಂಟರ್ ವತಿಯಿಂದ ನಗರದ ಕೊಡಗು ಬ್ಯಾರೀಸ್ ವೆಲ್ಫೇರ್ ಟ್ರಸ್ಟ್ ಕಚೇರಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಪೂರ್ವಭಾವಿ ಉಚಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಳಿಕ ಮಾತನಾಡಿದ ಅವರು, ಕೂರ್ಗ್ ಫೌಂಡೇಷನ್ ಸಂಸ್ಥೆಯ ಸೇವಾ ಮನೋಭಾವ ಶ್ಲಾಘನೀಯ. ಇಂತಹ ಸಮಾಜಮುಖಿ ಕಾರ್ಯಕ್ರಮಗಳಿಗೆ ಟ್ರಸ್ಟ್‌ನ ಸಂಪೂರ್ಣ ಬೆಂಬಲವಿದೆ ಎಂದರು.
ಮುಖ್ಯ ಅತಿಥಿ ವಕೀಲ ಕುಂಞಬ್ದುಲ್ಲ ಮಾತನಾಡಿ, ಸುಂದರ ಸಮಾಜವನ್ನು ಕಟ್ಟುವಲ್ಲಿ ಇಂದಿನ ಯುವ ಪೀಳಿಗೆಯ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಉನ್ನತ ಹುದ್ದೆಗೇರಲು ಬೇಕಾದ ಪೂರಕ ವಾತಾವರಣವನ್ನು ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ರೆಸೆಂಟ್ ಶಾಲೆಯ ಕಾರ್ಯದರ್ಶಿ ಜಿ.ಎಚ್.ಮುಹಮ್ಮದ್ ಹನೀಫ್ ವಹಿಸಿದ್ದರು. ಮಡಿಕೇರಿ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಮೆಹಮೂದ್ ಮಾಸ್ತರ್, ಕೂರ್ಗ್ ಎಜ್ಯುಕೇಶನ್ ಸೆಂಟರ್‌ನ ಅಬ್ದುಲ್ ಖಾದರ್, ಬ್ಯಾರೀಸ್ ಟ್ರಸ್ಟ್‌ನ ಬಿ.ಎಸ್.ರಫೀಕ್ ಅಹ್ಮದ್ ಉಪಸ್ಥಿತರಿದ್ದರು.
ಪಾಲಿಬೆಟ್ಟದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲ ತರಬೇತಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು. ಸುಮಾರು ಎರಡು ತಿಂಗಳ ಕಾಲ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.