ರಾಜ್ಯಕ್ಕೆ ಲಕ್ಷಾಂತರ ರೂ. ನಷ್ಟ
ಕಾರವಾರ, ಆ.7: ನಗರದ ನೌಕಾನೆಲೆಯ ಉನ್ನತ ಅಧಿಕಾರಿಗಳು ಸ್ಥಳೀಯ ಸಹಕಾರಿ ಸಂಘವನ್ನು ನಿರ್ಲಕ್ಷಿಸಿ, ಕಾನೂನು ಬಾಹಿರವಾಗಿ ಮಹಾರಾಷ್ಟ್ರದ ಕೋ ಆಪರೇಟಿವ್ ಸೊಸೈಟಿಯೊಂದಿಗೆ ವ್ಯವಹಾರ ನಡೆಸುತ್ತಿದ್ದು, ಇದರಿಂದ ರಾಜ್ಯಕ್ಕೆ ಲಕ್ಷಾಂತರ ರೂ. ನಷ್ಟವಾಗುತ್ತಿದೆ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಆರೋಪಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೌಕಾನೆಲೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಎಲ್ಲರೂ ಸೇರಿ ಪ್ರತಿ ನೌಕಾನೆಲೆ ವ್ಯಾಪ್ತಿಯಲ್ಲಿ ಸಹಕಾರಿ ಸಂಘಗಳನ್ನು ಸ್ಥಾಪಿಸಿಕೊಳ್ಳಲಾಗುತ್ತದೆ. ಈಗಾಗಲೇ ಕೊಚ್ಚಿ, ವಿಶಾಖಪಟ್ಟಣ, ಗೋವಾ, ದಾಂಡೇಲಿ ಸೇರಿದಂತೆ ಹಲವು ನೌಕಾನೆಲೆಗಳಲ್ಲಿ ಸ್ಥಾಪನೆಗೊಂಡಿದ್ದು, ಕರ್ನಾಟಕದಲ್ಲಿ ಎ.1 ರಂದು ಪ್ರಾರಂಭಗೊಂಡಿದೆ. ಆದರೆ ಇದಕ್ಕೆ ವ್ಯವಹಾರ ನಡೆಸಲು ಇನ್ನೂ ಅನುಮತಿ ನೀಡಿಲ್ಲ ಎಂದು ಆರೋಪಿಸಿದರು.
ಕರ್ನಾಟಕದಲ್ಲಿ ಸುಮಾರು 600ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಇಲ್ಲಿನ ಸೊಸೈಟಿಯಲ್ಲಿ ವ್ಯವಹರಿಸಲು ಅವಕಾಶ ಕಲ್ಪಿಸುತ್ತಿಲ್ಲ. ಬದಲಾಗಿ ಮಹಾರಾಷ್ಟ್ರದ ಕೋ ಆಪರೆಟಿವ್ ಸೊಸೈಟಿಯ ಶಾಖೆಯೊಂದನ್ನು ಕರ್ನಾಟಕದಲ್ಲಿ ಪ್ರಾರಂಭಿಸಿದ್ದು, ಈಗಾಗಲೇ ಮೂರು ತಿಂಗಳ ಅವಧಿಯಲ್ಲಿ ಸುಮಾರು 11 ಕೋಟಿ ರೂ. ವ್ಯವಹಾರ ನಡೆಸಲಾಗಿದೆ. ಇದು ಇಲ್ಲಿನ ಸಹಕಾರಿ ಸಂಘದಲ್ಲಿ ನಡೆಯಬೇಕಾದ ವ್ಯವಹಾರವಾಗಿರುವುದರಿಂದ, ರಾಜ್ಯಕ್ಕೆ ಸುಮಾರು 11 ಲಕ್ಷ ರೂ. ರಾಜಧನ ನಷ್ಟವಾಗಿದೆ ಎಂದು ಆರೋಪಿಸಿದರು.
ಮಹಾರಾಷ್ಟ್ರದ ಕೋ ಆಪರೇಟಿವ್ ಸೊಸೈಟಿಯಲ್ಲಿ ಸದಸ್ಯನಾಗಿದ್ದ ಅಜಯ್ ಕುಮಾರ್, ತಮ್ಮ ಸೊಸೈಟಿಯಲ್ಲಿ ಅವ್ಯವಹಾರವಾಗಿದೆ ಎಂದು ಆರೋಪಿಸಿ ಸಂಘದಿಂದ ಹೊರಬಂದಿದ್ದಾರೆ. ಅದರಲ್ಲಿ ಕರ್ನಾಟಕದೊಂದಿಗೆ ಅನಧಿಕೃತವಾಗಿ ವ್ಯವಹಾರ ನಡೆಸಿರುವುದು ತಿಳಿದುಬಂದಿದೆ ಎನ್ನಲಾಗಿದೆ. ಕರ್ನಾಟಕದಲ್ಲಿ ಸಂಘ ಪ್ರಾರಂಭವಾಗಿ ಹಲವು ತಿಂಗಳು ಕಳೆದರೂ, ಅನುಮತಿ ನೀಡದೆ ಇರುವುದು ನೌಕಾನೆಲೆ ಅಧಿಕಾರಿಗಳ ನಡೆಯ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿದೆ ಎಂದರು.
ಇದಲ್ಲದೆ ಜಿಲ್ಲೆಯ ಜನರು ಹತ್ತಾರು ಯೋಜನೆಗಳಿಗೆ ತಮ್ಮ ನೆಲ ಜಲ ಎಲ್ಲವನ್ನೂ ತ್ಯಾಗ ಮಾಡಿ ಕಷ್ಟದ ಜೀವನ ನಡೆಸುತ್ತಿದ್ದಾರೆ. ಇನ್ನೂ ಅದೆಷ್ಟೋ ಕುಟುಂಬಗಳಿಗೆ ಸರಿಯಾದ ಪರಿಹಾರ ವಿತರಣೆಯಾಗಿಲ್ಲ. ಹೀಗಿರುವಾಗ ರಾಜ್ಯದ ಜನರನ್ನು ಇಲ್ಲಿನ ಕೆಲಸಗಳಿಗೆ ಸೇರಿಸಿಕೊಳ್ಳುವುದಾಗಿ ಭರವಸೆ ನೀಡಿದ ನೌಕಾನೆಲೆಯವರು, ಈಗ ಹೊರ ರಾಜ್ಯದವರನ್ನು ನೇಮಕ ಮಾಡಿಕೊಂಡು ತ್ಯಾಗ ಮಾಡಿದವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಕೂಡಲೇ ನೌಕಾನೆಲೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು ಈ ವಿಷಯವಾಗಿ ಜಿಲ್ಲಾಧಿಕಾರಿಹಾಗೂ ನೆವಲ್ ಬೆಸ್‌ನ ಫ್ಲಾಗ್ ಆಫಿಸರ್ ಅವರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಭಾಕರ್ ಮಾಳ್ಸೇಕರ್, ರವಿ ಬೋಳುರಕರ್, ಶಿವಾನಂದ ಮೇತ್ರಿಸಂತೋಷ ಮಾಳ್ಸೇಕರ್, ಗುರುಪ್ರಸಾದ್ ಉಪಸ್ಥಿತರಿದ್ದರು.