×
Ad

ರೈತರ ಬಿಡುಗಡೆಗೆ ಆಗ್ರಹಿಸಿ ಕರವೇಯಿಂದ ಬೈಕ್ ರ್ಯಾಲಿ

Update: 2016-08-07 23:04 IST

ದಾವಣಗೆರೆ, ಆ.7: ಚಿತ್ರದುರ್ಗದ ಜೈಲಿನಲ್ಲಿ ಬಂಧಿಸಿಟ್ಟಿರುವ ಯಮನೂರು ರೈತರನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ರವಿವಾರ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಹಸಿರು ಸೇನೆ ಮುಖಂಡರು ದಾವಣಗೆರೆಯಿಂದ ಚಿತ್ರದುರ್ಗಕ್ಕೆ ಬೈಕ್ ರ್ಯಾಲಿ ನಡೆಸಿದರು. ನಗರದ ಜಯದೇವ ವೃತ್ತದಿಂದ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಗೆ ಚಾಲನೆ ನೀಡಿದ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಮಾತನಾಡಿ, ಮಹಾದಾಯಿ ನೀರಿಗಾಗಿ ಹೋರಾಟ ಮಾಡಿದ ರೈತರನ್ನು ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ ಜೈಲಿಗೆ ತಳ್ಳಿರುವುದು ಖಂಡನೀಯ. ಈ ಕೂಡಲೇ ಅವರನ್ನು ಬಂಧಮುಕ್ತಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ತಮ್ಮ ಹಕ್ಕನ್ನು ಕೇಳಿರುವ ರೈತರ ಮೇಲೆ ಪೊಲೀಸರು ದರ್ಪ ತೋರಿಸಿರುವುದು ನಾಚಿಕೆಗೇಡಿನ ಸಂಗತಿ. ಅಲ್ಲದೆ, ಇಲ್ಲ ಸಲ್ಲದ ಕೇಸ್‌ಗಳನ್ನು ಹಾಕಿ ಅವರನ್ನು ಜೈಲಿಗೆ ಕಳುಹಿಸಿರುವುದು ನಿಜಕ್ಕೂ ಖಂಡನೀಯ ಕ್ರಮ. ಜನರ ರಕ್ಷಣೆ ಮಾಡಬೇಕಾದ ಸರಕಾರ, ಪೊಲೀಸ್ ಇಲಾಖೆಯೇ ಈ ರೀತಿ ಗೂಂಡಾ ವರ್ತನೆ ತೋರಿದರೆ ನಾವು ಯಾರಲ್ಲಿ ನ್ಯಾಯ ಕೇಳಬೇಕು ಎಂದು ಪ್ರಶ್ನಿಸಿದ ಅವರು, ಈ ಕೂಡಲೇ ರೈತರ ಬಿಡುಗಡೆಗೆ ಕ್ರಮ ಕೈಗೊಳ್ಳದಿದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿವಿಧ ಸಂಘಟನೆಗಳೊಂದಿಗೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಆತ್ಮಸ್ಥೈರ್ಯ ತುಂಬಲು ಯತ್ನ: ಧಾರವಾಡ ಜಿಲ್ಲೆಯ ಯಮನೂರು ರೈತರನ್ನು ಬಂಧಿಸಿ ಚಿತ್ರದುರ್ಗದಲ್ಲಿ ಇಡುವ ಮೂಲಕ ರೈತರ ಹೋರಾಟವನ್ನು ದಮನಗೊಳಿಸುವ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ. ಪೊಲೀಸರಿಗೆ ಎಚ್ಚರಿಕೆ ನೀಡಿ, ರೈತರ ಪರ ನಿಲ್ಲಬೇಕಿದ್ದ ರಾಜಕಾರಣಿಗಳು ಜಾಣ ವೌನ ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಂಧಿತ ರೈತರಿಗೆ ಧೈರ್ಯ ತುಂಬಲು ಊಟ ಮತ್ತು ಹೊದಿಕೆಗಳನ್ನು ನೀಡಿ ಸಂತೈಸಲಾಗುವುದು ಎಂದರು.

ಈ ಸಂದರ್ಭ ಸಂಘಟನೆಯ ಮಧ್ಯಕರ್ನಾಟಕದ ಅಧ್ಯಕ್ಷ ಕೆ.ಜಿ.ಯಲ್ಲಪ್ಪ, ಮಲ್ಲಾಶೆಟ್ಟಿಹಳ್ಳಿ ಚನ್ನಬಸಪ್ಪ, ಹೊನ್ನೂರು ಮುನಿಯಪ್ಪ, ಶೇಖರ್ ನಾಯ್ಕಿ, ಬಸವರಾಜ್, ಅಹ್ಮದ್ ಅಲಿ, ಎಂ.ರವಿ, ಶ್ರೇಯಸ್, ನಾಗರಾಜ್ ಗೌಡ, ಕೆ.ಎಚ್.ಮೆಹಬೂಬ್, ರಾಮಣ್ಣ ತೆಲಗಿ, ಮಂಜುನಾಥ್ ಗಂಗು, ಎಂ.ಮಲ್ಲಪ್ಪ, ಎಂ. ಗದಿಗೆಪ್ಪ, ಸೈಯದ್ ಅಕ್ಬರ್, ಮಲ್ಲೇಶಪ್ಪ, ಮಾರುತಿ, ನವೀನ್, ಝಿಯಾವುಲ್ಲಾ ಮತ್ತಿತರರು ರ್ಯಾಲಿಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News