×
Ad

ಮದ್ಯದಂಗಡಿ ಮುಚ್ಚುವಂತೆ ಒತ್ತಾಯಿಸಿ ಪಂಚಾಯತ್‌ಗೆ ಮುತ್ತಿಗೆ

Update: 2016-08-09 21:59 IST

ಕುಶಾಲನಗರ, ಆ.9: ನಂಜರಾಯಪಟ್ಟಣದ ಮುಖ್ಯ ರಸ್ತೆ ಸಮೀಪ 6 ವರ್ಷಗಳಿಂದ ವ್ಯವಹರಿಸುತ್ತಿದ್ದ ಮದ್ಯದಂಗಡಿಗೆ ಬೀಗ ಹಾಕಿಸುವಲ್ಲಿ ಕೊನೆಗೂ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ. ಮದ್ಯದಂಗಡಿಯಿಂದ ಗ್ರಾಮದಲ್ಲಿ ಆಗುತ್ತಿದ್ದ ತೊಂದರೆಗಳನ್ನು ಕಂಡು ಬೇಸತ್ತಿದ್ದ ಗ್ರಾಮಸ್ಥರು ಮದ್ಯದಂಗಡಿ ಮುಚ್ಚಲು ಕಳೆದ ಮೂರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು. ಗ್ರಾಮ ಪಂಚಾಯತ್, ಅಬಕಾರಿ ಇಲಾಖೆ, ಜಿಲ್ಲಾಧಿಕಾರಿಗಳ ಮುಂದೆ ಹಲವು ಬಾರಿ ಮನವಿಗಳನ್ನು ಸಲ್ಲಿಸಿದ್ದರೂ ಪ್ರಯೋಜನ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ನಂಜುಂಡೇಶ್ವರ ಯುವಕ ಸಂಘದ ಆಶ್ರಯದಲ್ಲಿ ಒಟ್ಟುಗೂಡಿದ ಗ್ರಾಮಸ್ಥರು, ಮಂಗಳವಾರ ಗ್ರಾಮದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಪಂಚಾಯತ್ ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.

ಮದ್ಯದಂಗಡಿಗೆ ಬೀಗ ಹಾಕಿಸಬೇಕು ಅಥವಾ ಪಂಚಾಯತ್ ಆಡಳಿತ ಮಂಡಳಿ ರಾಜೀನಾಮೆ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ನಡೆಸಿದ ಪ್ರತಿಭಟನೆಗೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ), ದಲಿತ ಸಂಘರ್ಷ ಸಮಿತಿ ಹಾಗೂ ಸ್ಥಳೀಯ ಮಹಿಳಾ ಸಂಘಟನೆಗಳು ಸಾಥ್ ಕೊಟ್ಟಿದ್ದವು. ಈ ಸಂದರ್ಭದಲ್ಲಿ ಒಂದು ವಾರದೊಳಗೆ ಅಂಗಡಿಯನ್ನು ಮುಚ್ಚಲಾಗುವುದು ಎಂದು ಸ್ಥಳದಲ್ಲಿ ಹಾಜರಿದ್ದ ಅಬಕಾರಿ ಇಲಾಖೆ ಸಬ್‌ಇನ್‌ಸ್ಪೆಕ್ಟರ್ ಜಿ.ಆರ್.ಗಣೇಶ್ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರೂ ಫಲ ಸಿಗಲಿಲ್ಲ. ತಕ್ಷಣವೇ ಮದ್ಯದಂಗಡಿಗೆ ಬೀಗ ಹಾಕಿಸದಿದ್ದರೆ ಪ್ರತಿಭಟನೆ ಮುಂದುವರಿಸುವುದಾಗಿ ಧರಣಿ ಆರಂಭಿಸಲಾಯಿತು.

ಪರಿಸ್ಥಿತಿ ಹತೋಟಿ ಮೀರುತ್ತಿದ್ದಂತೆ ಅಬಕಾರಿ ಎಸ್ಸೈ ಗಣೇಶ್, ಮೇಲಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಚರ್ಚೆ ನಡೆಸಿ, ಈ ಕ್ಷಣದಿಂದಲೇ ಮದ್ಯದಂಗಡಿ ಬಾಗಿಲು ಮುಚ್ಚಿ ಬೀಗ ಹಾಕಿ ಸೀಲ್ ಮಾಡುವುದಾಗಿ ಪ್ರತಿಭಟನಾಕಾರರ ಮುಂದೆ ಪ್ರಕಟಿಸಿದರು. ತಮ್ಮ ಹೋರಾಟಕ್ಕೆ ಜಯ ಸಿಗುತ್ತಿದ್ದಂತೆ ಅಧಿಕಾರಿಗಳಿಗೆ ಜಯಘೋಷ ಕೂಗಿ ಪ್ರತಿಭಟನಾಕಾರರು ಪ್ರತಿಭಟನೆ ಹಿಂತೆಗೆದುಕೊಂಡರು.

ನಂಜುಂಡೇಶ್ವರ ಯುವಕ ಸಂಘದ ಅಧ್ಯಕ್ಷ ಸಿ.ಎಲ್.ವಿಶ್ವ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆ.ಬಿ. ರಾಜು, ಕರವೇ (ಪ್ರವೀಣ್ ಶೆಟ್ಟಿ ಬಣ)ದ ಜಿಲ್ಲಾಧ್ಯಕ್ಷ ಪಿ.ಕೆ. ಜಗದೀಶ್, ಎಸ್‌ಡಿಎಂಸಿ ಅಧ್ಯಕ್ಷ ರಮೇಶ್, ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಆರ್.ಕೆ. ಚಂದ್ರು, ಮಹಿಳಾ ಸಂಘಟನೆಗಳ ಮುಖಂಡರಾದ ಚಿತ್ರಾ ರಮೇಶ್, ಕೌಸಲ್ಯಾ, ಶೈಲಜಾ, ವನಜಾ, ರಾಧಾಮಣಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News