‘ಮಹಿಳಾ ಸಾಹಿತ್ಯದಿಂದ ಸ್ತ್ರೀ ವಿಮೋಚನಾ ಹೋರಾಟ ಸಾಧ್ಯ’
ತೀರ್ಥಹಳ್ಳಿ, ಆ.9: ಸ್ತ್ರೀ ಏಳಿಗೆಗಾಗಿ ಸಮಾಜ ಸುಧಾರಕರಾಗಿ ನಡೆಸಿದ ಚಳವಳಿಗಳು, ಸ್ವಾತಂತ್ರ್ಯ ಚಳವಳಿಗಳು ಭಾರತೀಯ ಸಮಾಜದಲ್ಲಿ ನವ ಜಾಗೃತಿ ಉಂಟಾಗುವಂತಾಯಿತು. ಮಹಿಳಾ ಸಾಹಿತ್ಯದಿಂದ ಸ್ತ್ರೀ ವಿಮೋಚನಾ ಹೋರಾಟ ನೋಡಲು ಸಾಧ್ಯವಾಯಿತು ಎಂದು ನಿವೃತ್ತ ಪ್ರಾಧ್ಯಾಪಕಿ ಡಾ.ಕಿರಣ್ ದೇಸಾಯಿ ಹೇಳಿದ್ದಾರೆ.
ಪಟ್ಟಣದ ತುಂಗಾ ಮಹಾವಿದ್ಯಾಲಯದಲ್ಲಿ ನಡೆದ ತೀರ್ಥಹಳ್ಳಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಪ್ರಭಾವತಿ ಶಾಮಣ್ಣ ದತ್ತಿನಿಧಿಯಾದ ಎಂ.ಕೆ. ಇಂದಿರಾ ಸ್ಮರಣಾರ್ಥ ನಡೆಸಿದ ಸಮಕಾಲೀನ ಮಹಿಳಾ ಸಾಹಿತ್ಯ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಲೋಕದಲ್ಲಿ ನಾವು ತಿಳಿದಂತೆ ಅಕ್ಕಮಹಾದೇವಿಯವರೇ ಮೊದಲ ಕವಯತ್ರಿ. ಅವರ ಚರಿತ್ರೆ, ಕೃತಿಗಳಿಂದ ಆಧ್ಯಾತ್ಮಿಕ ಸಾಹಸ ತಿಳಿಯುತ್ತದೆ. ಸಾಂಪ್ರದಾಯಿಕ ಸಮಾಜ ಸಂಕೋಲೆಗಳನ್ನು ಮುರಿದೊಗೆದು ಸಂಸಾರ ಎಂಬ ಸಂಕೋಲೆಯಿಂದ ಹೊರಬಂದು ಅವರು ಮಾಡಿದ ಸಾಧನೆ ಆಶ್ಚರ್ಯಕರವಾದುದು ಎಂದರು.
ಮಹಿಳಾ ಸಾಹಿತ್ಯ ಕ್ಷೇತ್ರದಲ್ಲಿ ಪ್ರಮುಖವಾಗಿ ಬಾಲ ವಿಧವೆಯರಾದ ತಿರುಮಲಾಂಬ ಆರ್.ಕಲ್ಯಾಣಮ್ಮನವರು ಪ್ರತಿಕೂಲ ಸಂದರ್ಭದಲ್ಲಿ ಸಾಹಿತ್ಯ ರಚನೆಗೆ ಕೈಹಾಕಿದ್ದರು. ನಂತರದಲ್ಲಿ ಕೊಡಗಿನ ಗೌರಮ್ಮ, ಶಾಮಲಾದೇವಿ, ಸರಸ್ವತಿಬಾಯಿ, ಎಂ.ಕೆ.ಇಂದಿರಾರವರು ಕಾದಂಬರಿಗಾರರಾಗಿ ತಮ್ಮ ಕೃತಿಯ ಮೂಲಕ ಮಹಿಳೆಯರ ಶೋಷಣೆ ಮತ್ತು ಸ್ಥಿತಿಗತಿ ಕುರಿತು ಅಕ್ಷರ ರೂಪ ನೀಡಿದ ಮಹಾನ್ ಲೇಖಕಿಯರಾಗಿ ನಮ್ಮ ಮುಂದೆ ಸದಾ ನೆನಪಿನಲ್ಲುಳಿಯುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ತುಂಗಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಗಣಪತಿ, ಇಂದು ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರೂ ವಿಶೇಷವಾದ ಆಸಕ್ತಿಯಿಂದ ಬರವಣಿಗೆಯತ್ತ ಸಾಗುತ್ತಿದ್ದಾರೆ. ಇದರಿಂದಾಗಿ ಮಹಿಳೆಯರ ಹಕ್ಕುಬಾಧ್ಯತೆಗಳು ಮತ್ತು ಸ್ಥಾನಮಾನದ ಕುರಿತು ಮುಕ್ತವಾಗಿ ಚರ್ಚಿಸಲು ಅವಕಾಶವಾಗಿದೆ ಎಂದರು. ಈ ಸಮಾರಂಭದಲ್ಲಿ ಪ್ರಭಾವತಿ ಶಾಮಣ್ಣ, ಕಡಿದಾಳು ದಯಾನಂದ್, ಆಡಿನಸರ ಸತೀಶ, ಉಮಾದೇವಿ ಉರಾಳ್ ಅದರಂತೆ ಮತ್ತಿತ್ತರರು ಉಪಸ್ಥಿತರಿದ್ದರು. ಸ್ವಪ್ನಾ ಶಶಿಧರ್ ಭಟ್ ಸ್ವಾಗತಿಸಿ, ಡಾ.ಅಂಜನಪ್ಪವಂದಿಸಿದರು.