×
Ad

ಸ್ವಾತಂತ್ರ ಹೋರಾಟದಲ್ಲಿ ಈಸೂರು ಗ್ರಾಮಸ್ಥರ ಕೊಡುಗೆ ಅಮೂಲ್ಯ: ಸಚ್ಚಿದಾನಂದ

Update: 2016-08-09 22:14 IST

ಶಿಕಾರಿಪುರ, ಆ.9: ಮಹಾತ್ಮಾ ಗಾಂಧೀಜಿಯವರ ಅಸಹಕಾರ ಚಳವಳಿ, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಘೋಷಣೆಗೆ ಅತ್ಯಂತ ಪರಿಣಾಮಕಾರಿಯಾಗಿ ಸ್ಪಂದಿಸಿದ ತಾಲೂಕಿನ ಈಸೂರು ಗ್ರಾಮಸ್ಥರು ಸ್ವತಂತ್ರ ಗ್ರಾಮ ಎಂದು ಪ್ರಥಮವಾಗಿ ಘೋಷಿಸಿ ಸ್ವಾತಂತ್ರದ ಕಿಚ್ಚನ್ನು ಬ್ರಿಟಿಷರಿಗೆ ತೋರಿಸಿಕೊಟ್ಟಿದ್ದಾರೆ ಎಂದು ಹಿರಿಯ ಪತ್ರಕರ್ತ ಸಚ್ಚಿದಾನಂದ ಬಿ.ಮಠದ್ ತಿಳಿಸಿದರು. ಮಂಗಳವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಮುಂಭಾಗದ ಈಸೂರು ಹುತಾತ್ಮರ ಸ್ಮಾರಕದ ಬಳಿ ನಡೆದ ‘ಚಲೇಜಾವ್ ಚಳವಳಿ ನೆನಪು’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

1857 ರಲ್ಲಿನ ಸೈನಿಕ ಬಂಡಾಯದಿಂದ ಆರಂಭವಾದ ಸ್ವಾತಂತ್ರ ಹೋರಾಟದ ತಾರ್ಕಿಕ ಅಂತ್ಯಕ್ಕೆ ಸತತ 90 ವರ್ಷ ಹಲವರ ತ್ಯಾಗ, ಬಲಿದಾನದಿಂದ ಸ್ವಾತಂತ್ರ ಗಳಿಸಲು ಸಾಧ್ಯವಾಯಿತು. ಸ್ವಾತಂತ್ರ ಹೋರಾಟದಲ್ಲಿ ತಾಲೂಕಿನ ಈಸೂರು ಗ್ರಾಮಸ್ಥರ ಕೊಡುಗೆ ಅಮೂಲ್ಯವಾಗಿದ್ದು, 2ನೆ ಮಹಾಯುದ್ಧದ ನಂತರ ಸ್ವಾತಂತ್ರವನ್ನು ನೀಡುವುದಾಗಿ ತಿಳಿಸಿ ಲಂಡನ್‌ನಲ್ಲಿನ ದುಂಡು ಮೇಜಿನ ಸಭೆಯಲ್ಲಿ ನೀಡಿದ ಆಶ್ವಾಸನೆ ಮರೆತು ಮಹಾತ್ಮಗಾಂಧೀಜಿ ಅವರಿಗೆ ಅವಮಾನಕರವಾಗಿ ವರ್ತಿಸಿದ ಬ್ರಿಟಿಷರ ವಿರುದ್ಧ್ದ ಅಸಹಕಾರ ಚಳವಳಿ, ದೇಶ ಬಿಟ್ಟು ತೊಲಗಿ ಎಂಬ ಕರೆಗೆ ಅತ್ಯಂತ ಪರಿಣಾಮಕಾರಿಯಾಗಿ ಸ್ಪಂದಿಸಿದ ಈಸೂರು ಗ್ರಾಮಸ್ಥರು ಗ್ರಾಮದೊಳಗೆ ಬ್ರಿಟಿಷರು ಪ್ರವೇಶಿಸದಂತೆ ತಡೆದು ಸ್ಥಳೀಯವಾಗಿ ಪ್ರತ್ಯೇಕ ಆಡಳಿತವನ್ನು ಶಾಲಾ ಮಕ್ಕಳಿಗೆ ವಹಿಸಿ ಮಲ್ಲಪ್ಪಯ್ಯ ಪಟೇಲ್‌ರವರನ್ನು ಪಿಎಸ್ಸೈ ಹಾಗೂ ತ್ಯಾವಣಗಿ ಜಯಣ್ಣರವರನ್ನು ತಹಶೀಲ್ದಾರ್‌ರನ್ನಾಗಿ ನೇಮಕಗೊಳಿಸಿ ಬ್ರಿಟಿಷರ ವಿರುದ್ಧ ಸ್ವತಂತ್ರ ಸರಕಾರ ರಚಿಸಿಕೊಂಡ ಹಿರಿಮೆಯನ್ನು ಈಸೂರು ಹೊಂದಿದೆ ಎಂದರು.

ದೇಶಕ್ಕಾಗಿ ವೈಯಕ್ತಿಕ ದ್ವೇಷವನ್ನು ಮರೆತು ಗ್ರಾಮಸ್ಥರು ಒಗ್ಗಟ್ಟಿನಿಂದ ಗ್ರಾಮಕ್ಕೆ ಬ್ರಿಟಿಷರು ಪ್ರವೇಶಿದಂತೆ ನಿರ್ಬಂಧಿಸಿ ಗಾಂಧೀ ಟೋಪಿ ಧರಿಸಿ, ಭಾರತ್ ಮಾತಾಕಿ ಜೈ ಎಂಬ ಘೋಷಣೆಯಿಂದ ಮಾತ್ರ ಪ್ರವೇಶ ಎಂಬ ಕಟ್ಟಪ್ಪಣೆಯನ್ನು ವಿಧಿಸಿದ್ದ ಈಸೂರು ಗ್ರಾಮದ ಶಾಲೆಗಳಲ್ಲಿ ಇಂದಿಗೂ ಗಾಂಧೀ ಟೋಪಿ ಸಮವಸವಾಗಿದೆ ಎಂದು ತಿಳಿಸಿದರು.

ಧ್ವಜಾರೋಹಣ ನೆರವೇರಿಸಿದ ಗ್ರಾಮಾಂತರ ಠಾಣೆ ಪಿಎಸ್ಸೈ ಚಂದ್ರಶೇಖರ್ ಮಾತನಾಡಿ, ಬ್ರಿಟಿಷರನ್ನು ಹೊಡೆದೋಡಿಸಲು ಚಂಪಾರಣ್ಯ ಚಳವಳಿ ಮೂಲಕ ಹೋರಾಟಕ್ಕೆ ಧುಮುಕಿದ ಗಾಂಧೀಜಿಯವರ ಕರೆಗೆ ಈಸೂರು, ಕುಂಸಿ ಗ್ರಾಮಸ್ಥರು ಪಾಲ್ಗೊಳ್ಳುವ ಮೂಲಕ ಅಡಿಗಲ್ಲು ಹಾಕಿದ್ದಾರೆ. ಧೈರ್ಯ ಸ್ವಾಭಿಮಾನದ ಪ್ರತೀಕವಾದ ಗ್ರಾಮಸ್ಥರ ಹೋರಾಟಕ್ಕೆ ಸ್ಮಾರಕ ಸಾಕ್ಷಿಯಾಗಿದೆ ಎಂದರು. ನಿವೃತ್ತ ಕೆಎಎಸ್ ಅಧಿಕಾರಿ ಎಚ್.ಟಿ ಬಳಿಗಾರ್, ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಹುಚ್ರಾಯಪ್ಪ ಮಾತನಾಡಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಾಲಕೃಷ್ಣಜೋಯಿಸ್ ವಹಿಸಿದ್ದರು. ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಪಾಲಾಕ್ಷಪ್ಪ, ಮುಖ್ಯಾಧಿಕಾರಿ ಬಾಲಾಜಿರಾವ್, ಪಿಎಸ್ಸೈ ಶಾಂತಮ್ಮ, ಶಿವಾನಂದಸಾನು, ಕೋಡ್ಯಪ್ಪ, ಅರುಣಕುಮಾರ್,ರಾಜು, ರಘು, ಎನ್‌ಸಿಸಿ ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News