ಬಿಜೆಪಿಯವರದ್ದು ಡೋಂಗಿ ರಾಷ್ಟ್ರಪ್ರೇಮ: ಶ್ರೀನಿವಾಸ್
ಸಾಗರ, ಆ.9: ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರ ದೇಶದ ಐಕ್ಯತೆ, ಸಮಗ್ರತೆ ಹಾಗೂ ಭದ್ರತೆಗಾಗಿ ತ್ಯಾಗಬಲಿದಾನ ಹಾಗೂ ಪ್ರಾಣ ನೀಡಿರುವ ಯಾವುದಾದರೂ ಪಕ್ಷವಿದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್ ಹೇಳಿದರು. ಇಲ್ಲಿನ ಬ್ರಾಸಂ ಸಭಾಭವನದಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕ್ವಿಟ್ ಇಂಡಿಯಾ ಚಳವಳಿಯ 75ನೆ ವರ್ಷಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ದೇಶದ ಭದ್ರತೆಗೋಸ್ಕರ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಿದ ಇಂದಿರಾಗಾಂಧಿಯವರು ಭಯೋತ್ಪಾದಕರ ದಾಳಿಗೆ ತುತ್ತಾದರೆ, ಶ್ರೀಲಂಕಾದಲ್ಲಿ ಎಲ್‌ಟಿಟಿಇ ನಿಗ್ರಹಿಸಲು ಸೈನ್ಯ ಕಳುಹಿಸಿದ ಕಾರಣಕ್ಕೆ ರಾಜೀವ್‌ಗಾಂಧಿಯವರು ಎಲ್‌ಟಿಟಿಇ ನಡೆಸಿದ ಆತ್ಮಾಹುತಿ ದಾಳಿಗೆ ಬಲಿಯಾದರು. ಬಿಜೆಪಿಯವರದ್ದು ಡೋಂಗಿ ರಾಷ್ಟ್ರಪ್ರೇಮವಾಗಿದ್ದು, ಯಾವ ನಾಯಕರೂ ರಾಷ್ಟ್ರಕ್ಕಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಂಡಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲ್ಲಿ ಗ್ರಾಮಾಂತರ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಲ್.ಟಿ.ತಿಮ್ಮಪ್ಪ, ನಗರ ಬ್ಲಾಕ್ ಅಧ್ಯಕ್ಷ ಮಕ್ಬೂಲ್ ಅಹ್ಮದ್, ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ನಗರಸಭೆ ಅಧ್ಯಕ್ಷ ಆರ್.ಗಣಾಧೀಶ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮುಹಮ್ಮದ್ ಖಾಸಿಂ, ಜಿಲ್ಲಾ ಪಂಚಾಯತ್ ಸದಸ್ಯ ಕಾಗೋಡು ಅಣ್ಣಪ್ಪ, ಅನ್ವರ್ ಭಾಷಾ, ಡಿ.ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.