×
Ad

ಕರ್ನಾಟಕದಲ್ಲಿನ್ನು ಸ್ಲಿಮ್-ಟ್ರಿಮ್ ರೇಶನ್ ಕಾರ್ಡ್: ಭಾರತದಲ್ಲೇ ಪ್ರಥಮ ಪ್ರಯೋಗ

Update: 2016-08-10 17:26 IST

ಇನ್ನು ಮುಂದೆ ಜನರು ರೇಶನ್ ಕಾಡ್ನ್ನು ಕೈಯ್ಯಲ್ಲಿ ಹಿಡಿದುಕೊಂಡು ಹೋಗಬೇಕಾಗಿಲ್ಲ. ಕಿಸೆಯೂ ಬೇಡ. ಕಿಸೆಯೊಳಗಿರುವ ಸಣ್ಣ ಪರ್ಸ್‌ನಲ್ಲಿ ಡ್ರೈವಿಂಗ್ ಲೈಸನ್ಸ್, ಎಟಿಎಂ ಕಾರ್ಡ್‌ನ ಪಕ್ಕದಲ್ಲೇ ರೇಶನ್ ಕಾರ್ಡ್‌ನ್ನೂ ಇಟ್ಟುಕೊಳ್ಳಬಹುದು. ಹೌದು, ಕರ್ನಾಟಕದಲ್ಲಿ ಇಂತಹ ಸ್ಮಾರ್ಟ್ ರೇಷನ್ ಕಾರ್ಡ್ ಮುಂದಿನ ದಿನಗಳಲ್ಲಿ ಜಾರಿಗೆ ಬರಲಿದೆ. ದೇಶದಲ್ಲೇ ಪ್ರಥಮಬಾರಿಗೆ ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಲಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಈ ಸ್ಮಾರ್ಟ್ ರೇಷನ್ ಕಾಡರ್ ಆಧಾರ್ ಕಾರ್ಡ್‌ನಂತೆ ಇರಲಿದೆ. ಹೆಸರು, ವಿಳಾಸ, ಕುಟುಂಬ ಸದಸ್ಯರ ವಿವರವಿರುವ ಮೇಲಿನ ಬಹುತೇಕ ಭಾಗವನ್ನು ಕತ್ತರಿಸಿ ಮನೆಯಲ್ಲಿ ಜೋಪಾನವಾಗಿ ಇಡಬಹುದು. ಕಾರ್ಡ್‌ನ ಕೆಳಗಿನ ಕಾಲುಭಾಗವನ್ನು ಲ್ಯಾಮಿನೇಶನ್ ಮಾಡಿ ಕಿಸೆಯಲ್ಲಿಟ್ಟುಕೊಳ್ಳುವುದು ಸುಲಭ. ಕಾರ್ಡ್‌ನ ಒಂದು ಬದಿಯಲ್ಲಿ ಯಜಮಾನನ ಹೆಸರು, ಫೋಟೋ, ಬಾರ್ ಕೋಡ್, ಕಾರ್ಡ್ ನಂಬರ್ ಇದ್ದರೆ, ಮತ್ತೊಂದು ಬದಿಯಲ್ಲಿ ವಿಳಾಸ ಇದೆ. ಸ್ಮಾರ್ಟ್ ರೇಶನ್ ಕಾರ್ಡಿನ ಬಾರ್ ಕೋಡ್‌ನ್ನು ಕಂಪ್ಯೂಟರ್‌ನಲ್ಲಿ ಅಥವಾ ಮೊಬೈಲ್‌ನಲ್ಲಿ ಸ್ಕಾನ್ ಮಾಡಿದರೆ ಆ ಕಾರ್ಡ್‌ನ ವಿವರಗಳು ಪರದೆಯ ಮೇಲೆ ಬಿತ್ತರವಾಗುತ್ತದೆ.

ಇವಲ್ಲದೆ, 161 ಸಂಖ್ಯೆಗೆ ಕರೆಮಾಡಿ ರೇಶನ್ ಕಾರ್ಡಿನ 12 ಸಂಖ್ಯೆಗಳನ್ನ್ನು ದಾಖಲಿಸಿದರೆ ಆಹಾರ ಧಾನ್ಯ, ಸೀಮೆ ಎಣ್ಣೆಯ ಕೂಪನ್ ಕೋಡ್ ಸಂದೇಶ ಮೊಬೈಲ್‌ಗೆ ಬರುತ್ತದೆ. ಇದನ್ನು ಬಳಸಲು ಅಸಾಧ್ಯವಾಗುವ ಸದಸ್ಯರಿಗೆ ಆಹಾರ ಇಲಾಖೆ ಸೂಚಿಸಿದ ಹತ್ತಿರದ ಸೆಂಟರ್‌ಗಳಿಂದ ಬಯೋಮೆಟ್ರಿಕ್ ಆಧಾರಿತ ಉಚಿತ ಕೂಪನ್ ಪಡೆಯಬಹುದು.

ಈ ಹಿಂದೆ ಇದ್ದ ಎಪಿಲ್, ಬಿಪಿಎಲ್ ಪದ್ಧತಿ ಇನ್ನಿಲ್ಲ. ಇನ್ನುಮುಂದಕ್ಕೆ ಆದ್ಯತಾ ಕುಟುಂಬ ಅಥವಾ ಆದ್ಯತೆಗೆ ಅನರ್ಹವಾದ ಕುಟುಂಬ ಎಂಬ ಅಚ್ಛ ಕನ್ನಡದ ಹೆಸರಿಡಲಾಗಿದೆ. ಇದು ದೇಶದಲ್ಲೇ ಪ್ರಥಮ ಪ್ರಯೋಗವಾಗಿದ್ದು, ಇನ್ನು ಮುಂದೆ ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ರಿಜಿಸ್ಟರ್ಡ್ ಅಂಚೆ ಮೂಲಕ ಕಾರ್ಡ್ ಮನೆಬಾಗಿಲಿಗೆ ಬರಲಿದೆ. ಪಾಸ್‌ಪೋರ್ಟ್ ಮಾದರಿಯಲ್ಲಿ ಆನ್‌ಲೈನ್ ಮೂಲಕ ಅರ್ಜಿದಾರರು ವಿವರ ಸಲ್ಲಿಸಬಹುದು. ಈ ಯೋಜನೆಯು ಸಕಾಲ ಯೋಜನೆಗೆ ಅಳವಡಿಸುವುದರಿಂದ ರೇಶನ್ ಕಾರ್ಡ್ ವಿತರಣಾ ಪ್ರಕ್ರಿಯೆ ವೇಗ ಪಡೆಯಲಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

Writer - ರಶೀದ್ ವಿಟ್ಲ

contributor

Editor - ರಶೀದ್ ವಿಟ್ಲ

contributor

Similar News