ಸೆಪ್ಟಂಬರ್ ಮೊದಲ ವಾರದಲ್ಲಿ ರೈತರಿಗೆ ಭೂಮಿ ಹಂಚಿಕೆ: ಎ. ಮಂಜು
ಹಾಸನ, ಆ.10: ಮುಂದಿನ ತಿಂಗಳ ಮೊದಲ ವಾರದಲ್ಲಿ ಎಸ್.ಎಂ. ಕೃಷ್ಣ ನಗರ ಭೂಮಿ ಹಂಚಿಕೆ ಆಗಿ ರೈತರಿಗೆ ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎ. ಮಂಜು ತಿಳಿಸಿದ್ದಾರೆ.
ನಗರದ ಅರಸೀಕೆರೆ ರಸ್ತೆ, ನಿರ್ಮಾಣವಾಗುತ್ತಿರುವ ಎಸ್.ಎಂ. ಕೃಷ್ಣ ನಗರ ಜಾಗವನ್ನು ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, 453 ಎಕರೆಯಲ್ಲಿ ಎಸ್.ಎಂ. ಕೃಷ್ಣ ನಗರ ವಸತಿ ಬಡಾವಣೆ ನಿರ್ಮಾಣವಾಗುತ್ತಿದ್ದು, ಇಡೀ ರಾಜ್ಯದಲ್ಲೆ ಪ್ರಥಮ ಬಾರಿಗೆ ಹಾಸನದಲ್ಲಿ ನಿರ್ಮಿತವಾಗುತ್ತಿದೆ. ಯುಜಿಡಿ ಮತ್ತು ಇಲೆಕ್ಟ್ರಿಕಲ್ ಎಲ್ಲಾ ಕೂಡ ಅಂಡರ್ ಪಾಸ್‌ನಲ್ಲಿ ಮಾಡಲಾಗಿದೆ ಎಂದರು.
ರೈತರೊಂದಿಗೆ ಒಂದು ಸಭೆ ಮಾಡಲಾಗುವುದು. ರೈತರಿಗೆ ಯಾವಾಗ ಸೈಟು ಕೊಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿ ನಂತರ ಸೆಪ್ಟಂಬರ್ ಮೊದಲ ವಾರದಲ್ಲಿ ಸೈಟನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಒಟ್ಟು 280 ಕೋಟಿ ವೆಚ್ಚ ತಗಲಲಿದ್ದು, ಈಗಾಗಲೆ 50 ಕೋಟಿ ರೂ. ಖರ್ಚು ಮಾಡಲಾಗಿದೆ. ಈ ಭಾಗದಲ್ಲಿ 14 ಎಕರೆಯಲ್ಲಿ ಒಂದು ಕೆರೆ ಕೂಡ ಇರುತ್ತದೆ. ಮಳೆ ನೀರನ್ನೆಲ್ಲಾ ಕೆರೆಗೆ ಬಿಡಲಾಗುವುದು. ಇಲ್ಲಿ ಬೋಟಿಂಗ್, ವಾಕಿಂಗ್, ಉದ್ಯಾನವನ ನಿರ್ಮಿಸಲಾಗುವುದು. ಮುಕ್ತ ವಿಶ್ವವಿದ್ಯಾನಿಲಯಕ್ಕೆ 3 ಎಕರೆ ಭೂಮಿ ಕೊಡಲಾಗಿದೆ. ಗಾಂಧಿ ಭವನಕ್ಕೂ ಮನವಿ ಮಾಡಿರುವುದರಿಂದ ಕೊಡಲಾಗುವುದು. 60 ಎಕರೆ ಜಾಗವನ್ನು ಪಾರ್ಕಿಂಗ್‌ಗೆ ಬಿಡಲಾಗುವುದು. 40 ಎಕರೆ ಜಾಗವನ್ನು ಕಾಲೇಜು ಮತ್ತು ಸಾರ್ವಜನಿಕರ ಉಪಯೋಗಕ್ಕೆ ಬಿಡಲಾಗುವುದು. ಕ್ರಿಕೆಟ್ ಕ್ರೀಡಾಂಗಣ ಕೂಡ ಮಾಡಲಾಗುವುದು. ರೈತರಿಗೆ ಭೂಮಿ ಹಂಚಿಕೆಯಾದ ಮೇಲೆ ಇನ್ನು 15 ದಿವಸದಲ್ಲಿ ಜನರಿಗೆ ಲಭ್ಯವಾಗಲಿದೆ. ರೈತರದು ಸೇರಿ ಒಟ್ಟು 6400 ಸೈಟುಗಳಿವೆ ಎಂದರು.
ಇದೆ ವೇಳೆ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ರಮೇಶ್ ಇತರರು ಇದ್ದರು.