ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಗೆ ಚಾಲನೆ
ಸಾಗರ, ಆ.10: ಇಲ್ಲಿನ ತಾಲೂಕು ಆಡಳಿತದ ವತಿಯಿಂದ ನಗರಕ್ಕೆ ಹೊಂದಿಕೊಂಡಿದ್ದ ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡವರನ್ನು ತೆರವುಗೊಳಿಸುವ ಕೆಲಸಕ್ಕೆ ಬುಧವಾರ ತಹಶೀಲ್ದಾರ್ ಎನ್.ಟಿ.ಧರ್ಮೋಜಿರಾವ್ ನೇತೃತ್ವದಲ್ಲಿ ಚಾಲನೆ ನೀಡಲಾಯಿತು. ಕಲ್ಮನೆ ಗ್ರಾಮಪಂಚಾಯತ್ ಅರಳಿಕೊಪ್ಪಗ್ರಾಮದಲ್ಲಿ ತೆರವು ಕಾರ್ಯಾಚರಣೆಗೆ ಹೋಗಿದ್ದ ತಹಶೀಲ್ದಾರ್ ಮತ್ತು ತಂಡದವರನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡು, ದೊಡ್ಡದೊಡ್ಡ ಶ್ರೀಮಂತರು ನೂರಾರು ಎಕರೆ ಸರಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ. ನಾವು ಸೂರಿಲ್ಲದೆ ಮನೆ ಕಟ್ಟಿಕೊಂಡಿದ್ದು, ಅದನ್ನು ತೆರವುಗೊಳಿಸಲು ಮುಂದಾಗಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪತ್ರಕರ್ತರೊಂದಿಗೆ ಮಾತನಾಡಿದ ತಹಶೀಲ್ದಾರ್ ಎನ್.ಟಿ.ಧರ್ಮೋಜಿರಾವ್, ಸರಕಾರದ ಅಧಿಸೂಚನೆಯಂತೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ಜನವರಿ 1/2012ರೊಳಗೆ ಮನೆ ನಿರ್ಮಿಸಿಕೊಂಡವರನ್ನು ಹೊರತು ಪಡಿಸಿ, ಈಚೆಗೆ ಸರಕಾರಿ ಜಮೀನನ್ನು ಒತ್ತುವರಿ ಮಾಡುವ ಉದ್ದೇಶದಿಂದಲೇ ಮನೆ ನಿರ್ಮಿಸಿಕೊಂಡವರನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುತ್ತಿದೆ ಎಂದರು. ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಳ್ಳುವುದು ಅಪರಾಧ. ಬಡವರಿಗೆ ರಾಜೀವ್‌ಗಾಂಧಿ ವಸತಿ ಯೋಜನೆಯಡಿ ಜಾಗ ನೀಡಿ ಮನೆ ನೀಡಲಾಗುತ್ತದೆ. ಇದನ್ನು ಗ್ರಾಮಸ್ಥರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಆಡಳಿತ ಒತ್ತುವರಿ ತೆರವುಗೊಳಿಸುವ ಬದಲು ನೀವೇ ತೆರವು ಮಾಡುವುದು ಒಳ್ಳೆಯದು ಎಂದು ತಿಳಿಸಿದರು. ಗ್ರಾಮಾಂತರ ಪ್ರದೇಶದ 94 ಸಿ ಅಡಿ ಅರ್ಜಿ ಸಲ್ಲಿಸಲು ಅಕ್ಟೋಬರ್ 4 ಹಾಗೂ ನಗರ ಪ್ರದೇಶದಲ್ಲಿ 94ಸಿಸಿ ಅಡಿ ಅರ್ಜಿ ಸಲ್ಲಿಸಲು ಅಕ್ಟೋಬರ್27, 2016 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸದೆ ಇರುವವರು 65 ರೂ. ಪಾವತಿಸಿ, ತಹಶೀಲ್ದಾರ್ ಕಚೇರಿಯ ಅಟಲ್‌ಜೀ ಕೇಂದ್ರದಲ್ಲಿ ಸಲ್ಲಿಸಬಹುದು ಎಂದರು. ಮಂಕೋಡು ಸಮೀಪದ ಜೈಲ್‌ಗೆ ಮೀಸಲಿಟ್ಟ ಜಾಗ, ಬಸವನಹೊಳೆಯ ಸಮೀಪದ ಜಂಬಗಾರು, ಆವಿನಹಳ್ಳಿ ಸ.ನಂ. 46, ಕಲ್ಮನೆ ಗ್ರಾಪಂ ಅರಳಿಕೊಪ್ಪ ಸೇರಿದಂತೆ ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಹಂತಹಂತವಾಗಿ ತೆರವುಗೊಳಿಸಲಾಗುತ್ತಿದೆ. ಯಾರಾದರೂ ಸರಕಾರಿ ಜಮೀನು ಒತ್ತುವರಿ ಮಾಡಿದ್ದರೆ ಅಂತಹವರ ವಿವರ ನೀಡಿದರೆ, ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇರಿಸುವ ಜೊತೆಗೆ ಅತಿಕ್ರಮಣದಾರರ ವಿರುದ್ದ ಕ್ರಮ ಜರಗಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ರೇಣುಕಪ್ಪ, ಜಗದೀಶ್, ಕೃಷ್ಣಮೂರ್ತಿ ಮತ್ತಿತರರು ಹಾಜರಿದ್ದರು.