×
Ad

ಸೊರಬ: ಹಸಿರೀಕಣ ಕಾರ್ಯಕ್ರಮ

Update: 2016-08-10 22:06 IST

  ಸೊರಬ, ಆ.10: ಅರಣ್ಯ ಇಲ್ಲದವರಿಗೆ ಅದರ ಮಹತ್ವ ತಿಳಿದಿದೆ. ಆದರೆ ಯಾರು ಅರಣ್ಯ ಸಂಪತ್ತು ಹೊಂದಿದ್ದಾರೋ ಅವರಿಗೆ ಅದರ ಮಹತ್ವ ತಿಳಿದಿಲ್ಲ, ಅರಣ್ಯದ ಬಗ್ಗೆ ತಿಳಿಯಲು ಈಗ ಜಾಗೃತರಾಗುತ್ತಿದ್ದಾರೆ ಎಂದು ಪಿಎಸ್ಸೈ ಮಂಜುನಾಥ ಅರ್ಜುನ ಲಿಂಗಾರೆಡ್ಡಿ ತಿಳಿಸಿದರು.

  ತಾಲೂಕಿನ ಬಾಡದಬೈಲು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ, ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಹಸಿರೀಕರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅರಣ್ಯವು ನೈಸರ್ಗಿಕವಾದ ಸಂಪತ್ತಾಗಿದ್ದು, ಅದು ಎಲ್ಲರಿಗೂ ಅನುಭವಿಸಲು ಸಿಗುವುದಿಲ್ಲ, ಅದನ್ನು ಅನುಭವಿಸಲು ಪುಣ್ಯಬೇಕು. ಅದು ಮಲೆನಾಡಿನ ಭಾಗದವರಿಗೆ ಸಿಕ್ಕಿದ್ದು ನಿಮ್ಮ ಅದೃಷ್ಟವಾಗಿದೆ. ಗಿಡಗಳನ್ನು ಕೇವಲ ನೆಟ್ಟರೆ ಸಾಲದು ಅವುಗಳನ್ನು ಸಂರಕ್ಷಿಸುವ ಹೊಣೆ ಹೊತ್ತಾಗ ಮಾತ್ರ ಗಿಡ ನೆಟ್ಟಿರುವುದಕ್ಕೆ ಸಾರ್ಥಕವಾಗುತ್ತದೆ. ಎಂದರು.

ವಲಯಾರಣ್ಯಾಧಿಕಾರಿ ಎಂ.ಎಸ್. ಅಜಯ್ ಕುಮಾರ್ ಮಾತನಾಡಿ, ಪರಿಸರದಲ್ಲಿ ಭೂ ತಾಪಮಾನ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಅದನ್ನು ಸಮತೋಲನದಲ್ಲಿಡಲು ನಾವು ಸಸಿ ನೆಡುವುದರ ಮೂಲಕ ಸರಿದೂಗಿಸಬೇಕಾಗಿದೆ. ವಾತಾವರಣದಲ್ಲಿ ಶೇ.1ರಷ್ಟು ಭೂ ತಾಪಮಾನ ಏರಿಕೆಯಾದರೂ, ಇಳುವರಿಯಲ್ಲಿ ಶೇ.20ರಷ್ಟು ಕಡಿಮೆಯಾಗುತ್ತದೆ. ಹಲವು ಸಾಂಕ್ರಾಮಿಕ ರೋಗಗಳಿಗೂ ತುತ್ತಾಗುವ ಸಂಭವವಿದ್ದು, ನಾವು ಮುಂದಿನ ಪೀಳಿಗೆಗೆ ಅರಣ್ಯಉಳಿಸಬೇಕಾದರೆ ಮುನ್ನೆಚ್ಚರಿಕೆಯಾಗಿ ಇಂತಹ ಸಂಘ-ಸಂಸ್ಥೆಗಳು, ಸಾರ್ವಜನಿಕರು, ವಿದ್ಯಾರ್ಥಿಗಳು, ಯುವಕರು ಪರಿಸರದ ಕಾಳಜಿವಹಿಸಿದಾಗ ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸಿದಾಗ ಮಾತ್ರ ಜನಸಾಮಾನ್ಯರಲ್ಲಿ ಅರಿವುಂಟಾಗಿ ಅರಣ್ಯ ಉಳಿಸಬಹುದು ಎಂದರು.

ಈ ಸಂದಭರ್ದಲ್ಲಿ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಶ್ರೀನಿವಾಸ್ ಯರಡೋಣಿ, ಕರವೇ ತಾಲೂಕು ಅಧ್ಯಕ್ಷ ವಿಜಯ ಗೌಳಿ, ಕಾನೂನು ಸಲಹೆಗಾರ ವಕೀಲ ವೈ.ಜಿ. ಪುಟ್ಟಸ್ವಾಮಿ, ಉಪವಲಯಾರಣ್ಯಾಧಿಕಾರಿ ನಾಗರಾಜ್, ಸಿಆರ್‌ಪಿ ರಾಘವೇಂದ್ರ, ಮುಖ್ಯ ಶಿಕ್ಷಕಿ ಆಶಾ, ಎಸ್‌ಡಿಎಂಸಿ ಅಧ್ಯಕ್ಷ ದ್ಯಾವಪ್ಪ, ಪ್ರಮುಖರಾದ ಪ್ರದೀಪ್, ತ್ಯಾಗರಾಜ್, ಪ್ರಸನ್ನ ಕುಮಾರ್, ಶಾಲಾ ಮಕ್ಕಳು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News