ಒತ್ತುವರಿ ತೆರವುಗೊಳಿಸಲು ಒತ್ತಾಯಿಸಿ ಮನವಿ
ಸಾಗರ, ಆ.10: ತಾಲೂಕಿನ ಉಳ್ಳೂರು ಗ್ರಾಮದ ಸರ್ವೇ ನಂ. 73ರ ಸರಕಾರಿ ಜಾಗವನ್ನು ಒತ್ತುವರಿ ಮಾಡುತ್ತಿದ್ದು, ಅದನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಬುಧವಾರ ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದರು. ಉಳ್ಳೂರು ಗ್ರಾಮದ ಸರ್ವೇ ನಂ. 73ರ ಸರಕಾರಿ ಜಾಗವನ್ನು ಗ್ರಾಮಸ್ಥರ ಅನುಕೂಲಕ್ಕಾಗಿ ಮುಫತ್ತಾಗಿದೆ. ಸುಮಾರು 2 ಎಕರೆ ಜಾಗದಲ್ಲಿ ಯಾರೂ ಸಾಗುವಳಿ ಮಾಡಿರುವುದಿಲ್ಲ. ಈ ಜಾಗವನ್ನು ಜಾನುವಾರುಗಳ ಮೇವಿಗೆ ಹಾಗೂ ಊರಿನವರ ಉಪಯೋಗಕ್ಕಾಗಿ ಕಾಯ್ದುಕೊಂಡು ಬಂದಿದ್ದೇವೆ. ಇತ್ತೀಚೆಗೆ ನಂದಿಕೆರೆ ನಿವಾಸಿ ಪುಟ್ಟಪ್ಪಎಂಬವರು ಈ ಜಾಗವನ್ನು ಅತಿಕ್ರಮಿಸಿಕೊಂಡು ಬೇಲಿ ನಿರ್ಮಿಸಿದ್ದರು. ಗ್ರಾಮಸ್ಥರು ಈ ಒತ್ತುವರಿಯನ್ನು ತೆರವುಗೊಳಿಸಿ, ಉಳ್ಳೂರು ಗ್ರಾಪಂಗೆ ಮಾಹಿತಿ ನೀಡಿರುತ್ತೇವೆ. ನಾವು ಒತ್ತುವರಿ ತೆರವು ಮಾಡಿದ್ದರಿಂದ ನಂದಿಕೆರೆ ವಾಸಿಗಳಾದ ದುರ್ಗಪ್ಪ ಮತ್ತು ಅಣ್ಣಪ್ಪಎಂಬವರು ಗ್ರಾಮಸ್ಥರ ಮೇಲೆ ಗಲಾಟೆಗೆ ಬಂದಿರುತ್ತಾರೆ ಎಂದು ಮನವಿಯಲ್ಲಿ ಹೇಳಲಾಗಿದೆ. ನಾವು ಜಮೀನು ಒತ್ತುವರಿ ತೆರವು ಮಾಡಿದ ಹಿನ್ನೆಲೆಯಲ್ಲಿ ಸ.ನಂ.71ರಲ್ಲಿ ಜನ ಸಂಚಾರಕ್ಕೆ ನಕಾಶೆಯಲ್ಲಿ ಕಂಡು ಬಂದಿದ್ದ ಕಾಲುದಾರಿಯನ್ನು ದುರ್ಗಪ್ಪಎಂಬವರು ಬಂದ್ ಮಾಡಿ, ಜನಸಂಚಾರಕ್ಕೆ ಅನನುಕೂಲ ಮಾಡಿದ್ದಾರೆ. ನಕಾಶೆಯಲ್ಲಿ ಕಂಡ ಕಾಲುದಾರಿಯನ್ನು ಮುಚ್ಚಿರುವ ಕುರಿತು ಈಗಾಗಲೇ ಉಳ್ಳೂರು ಗ್ರಾಪಂಗೆ ಹಾಗೂ ತಹಶೀಲ್ದಾರ್ ಅವರಿಗೆ ದೂರು ನೀಡಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಕೂಡಲೇ ಸಾರ್ವಜನಿಕರ ಉಪಯೋಗಕ್ಕೆ ಮೀಸಲಿರಿಸಿದ್ದ ಸರಕಾರಿ ಜಾಗದ ಒತ್ತುವರಿಯನ್ನು ತೆರವುಗೊಳಿಸಬೇಕು. ನಕಾಶೆಯಲ್ಲಿ ಕಂಡು ಬಂದಿರುವ ಕಾಲುದಾರಿಯನ್ನು ತೆರವುಗೊಳಿಸಿ, ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಕಲ್ಪಿಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಪ್ರಭಾಕರ್, ಗಾಮಪ್ಪ ಯು.ಸಿ., ಅಣ್ಣಪ್ಪ, ಅಸ್ಲಾಂ ಸಾಬ್, ಖಲಂದರ್ ಸಾಬ್, ಖಾದರ್ ಸಾಬ್, ಅಣ್ಣಪ್ಪ, ಪಿ.ರಾಮಪ್ಪ, ನಾಗರಾಜ್ ಮತ್ತಿತರರು ಹಾಜರಿದ್ದರು.