ಮರಳು ಮಾಫಿಯಾದ ಒತ್ತಡಕೆ್ಕ ಮಣಿದು ಪಿಡಿಒ ವರ್ಗಾವಣೆ: ಆರೋಪ
ಹೊನ್ನಾವರ, ಆ.10: ತಾಲೂಕಿನ ಕಾಸರಕೋಡ ಗ್ರಾಪಂ ಪಿಡಿಒ ನಾಗರಾಜ ವಿ. ಅವರನ್ನು ಅಕ್ರಮ ಮರಳು ಮಾಫಿಯಾದ ಒತ್ತಡದ ಹಿನ್ನೆಲೆಯಲ್ಲಿ ಬೇರೆಡೆಗೆ ಎತ್ತಂಗಡಿ ಮಾಡಲಾಗಿದ್ದು, ವರ್ಗಾವಣೆಯನ್ನು ರದ್ದು ಗೊಳಿಸದಿದ್ದರೆ ಗ್ರಾಪಂಗೆ ಬೀಗ ಹಾಕಿ ಪ್ರತಿಭಟನೆ ನಡೆಸುವುದಾಗಿ ಗ್ರಾಪಂ ಸಭಾಭವನದಲ್ಲಿ ತುರ್ತು ಸಭೆ ನಡೆಸಿದ ಗ್ರಾಪಂ ಸದಸ್ಯರು ಹಾಗೂ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.
ಗ್ರಾಪಂ ಅಧ್ಯಕ್ಷೆ ದಿಲ್‌ಶಾದ್ ಬೇಗಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಪಂ ಸದಸ್ಯ ಅಶೋಕ ಕಾಸರಕೋಡ ಮಾತನಾಡಿ, ಪಿಡಿಒ ನಾಗರಾಜ ವಿ.ಅವರ ಮೇಲೆ ಯಾವುದೇ ದೂರುಗಳಿಲ್ಲ. ಅಭಿವೃದ್ಧಿ ಕೆಲಸಗಳನ್ನು ಒಳ್ಳೆಯ ರೀತಿಯಿಂದ ಮಾಡುತ್ತಾರೆ. ಯಾವುದೇ ದೂರುಗಳಿಲ್ಲದಿದ್ದರೂ ಅವರನ್ನು ಎತ್ತಂಗಡಿ ಮಾಡಲಾಗಿದೆ ಎಂದು ಆರೋಪಿಸಿದರು.
ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮ ಮರಳು ತೆಗೆದು ಸಾಗಣೆೆ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಲು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಸಾರ್ವಜನಿಕರು ಈ ಹಿಂದೆ ಪಂಚಾಯತ್‌ಗೆ ಬಂದು ಆಗ್ರಹಿಸಿದ್ದರು. ಕ್ರಮ ಜರಗಿಸುವಂತೆ ಪಂಚಾಯತ್ ಸದಸ್ಯರು ಪಿಡಿಒ ಗೆ ಸೂಚಿಸಿದ್ದರು. ಪಿಡಿಒ ಅವರು ರೇತಿ ಸೈಟ್‌ಗಳಿಗೆ ಭೇಟಿ ನೀಡಿ ಅಕ್ರಮ ಮರಳು ಗಾಡಿಗಳನ್ನು ಹಿಡಿದು ದಂಡ ಹಾಕಲು ಕಾರಣರಾಗಿದ್ದು, ಹೀಗಾಗಿಯೇ ಅವರನ್ನು ಎತ್ತಂಗಡಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಶಾಸಕ ಮಂಕಾಳ ವೈದ್ಯರನ್ನು ಭೇಟಿ ಮಾಡಿ ಪಿಡಿಒ ಅವರನ್ನು ವರ್ಗಾವಣೆ ಮಾಡದಂತೆ ತಡೆಯಬೇಕೆಂದು ವಿನಂತಿಸಲಾಗಿತ್ತು. ಶಾಸಕರು ಪಿಡಿಒ ರನ್ನು ವರ್ಗಾವಣೆ ಮಾಡದಂತೆ ತಾಪಂ ಕಾರ್ಯ ನಿರ್ವಹಣಾಧಿಕಾರಿಯವರಿಗೆ ಸೂಚಿಸಿದ್ದರು.ಆದರೆ ಶಾಸಕರ ಮಾತಿಗೂ ಬೆಲೆಕೊಡದೆ ಕೊಡಾಣಿ ಗ್ರಾಪಂ ಪಿಡಿಒರನ್ನು ಕಾಸರಕೋಡ ಗ್ರಾಪಂಗೆ ಹಾಜರಾಗಲು ಸೂಚಿಸಲಾಗಿದೆ ಎಂದು ಆರೋಪಿಸಿದರು.
ಗ್ರಾಪಂ ಸದಸ್ಯೆ ವಿಮಲಾ ನಾಯ್ಕ ಮಾತನಾಡಿ, ಪಿಡಿಒ ನಾಗರಾಜ.ವಿ.ರನ್ನು ವರ್ಗಾವಣೆ ಮಾಡಿದರೆ ಸಾರ್ವಜನಿಕರೊಂದಿಗೆ ಕೂಡಿ ಪಂಚಾಯತ್ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಗ್ರಾಪಂ ಉಪಾಧ್ಯಕ್ಷ ಜಗದೀಶ ತಾಂಡೇಲ, ಸದಸ್ಯರುಗಳಾದ ವಿಕ್ಟರ್ ರೊಡ್ರಿಗಸ್, ಮಂಗಲಾ ಖಾರ್ವಿ, ಹನ್ಮಂತ ತಾಂಡೇಲ್, ಪರಮೇಶ್ವರ ಮೇಸ್ತ ಮತ್ತಿತರರು ಉಪಸ್ಥಿತರಿದ್ದರು.