‘ಸಾಮಾಜಿಕ ಜಾಲತಾಣಗಳಿಂದ ವಿದ್ಯಾರ್ಥಿಗಳು ದೂರ ಉಳಿಯಿರಿ’
ಮಡಿಕೇರಿ, ಆ.10: ಇಂದಿನ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಳ್ಳುತ್ತಿರುವುದರಿಂದ ಶೈಕ್ಷಣಿಕ ಜೀವನದಲ್ಲಿ ಯಶಸ್ಸನ್ನು ಸಾಧಿಸದೆ ವೈಫಲ್ಯತೆಯನ್ನು ಕಾಣುತ್ತಿದ್ದಾರೆ ಎಂದು ಉಜಿರೆ ಧರ್ಮಸ್ಥಳ ಮಂಜುನಾಥ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ರಾಷ್ಟ್ರ ಪ್ರಶಸ್ತಿ ವಿಜೇತ ಅಧಿಕಾರಿ ಡಾ.ಬಿ.ಎ.ಕುಮಾರ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಎನ್ನೆಸ್ಸೆಸ್ ವಾರ್ಷಿಕ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಎನ್ನೆಸ್ಸೆಸ್‌ನಂತಹ ಚಟುವಟಿಕೆಗಳನ್ನು ಮೈಗೂಡಿಸಿಕೊಳ್ಳುವುದರಿಂದ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬಹುದಾಗಿದೆ. ಆದರೆ ಇಂದಿನ ವಿದ್ಯಾರ್ಥಿಗಳು ಫೇಸ್‌ಬುಕ್, ವಾಟ್ಸ್‌ಆ್ಯಪ್ ಹಾಗೂ ಟೆಲಿವಿಷನ್‌ಗಳಲ್ಲಿ ಹೆಚ್ಚಾಗಿ ಕಾಲಹರಣ ಮಾಡುತ್ತಿರುವುದರಿಂದ ಜೀವನದ ವೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ ಮತ್ತು ಶೈಕ್ಷಣಿಕ ಪ್ರಜ್ಞೆಯಿಂದ ದೂರವಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಎನ್ನೆಸ್ಸೆಸ್ನಲ್ಲಿ ಕಲಿಯುವ ಜೀವನದ ಪಾಠವನ್ನು ಮುಂದಿನ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿಗಳಾಗಿ ಸಮಾಜಕ್ಕೆ ಕೊಡುಗೆ ನೀಡಬೇಕೆಂದು ಕರೆ ನೀಡಿದರು.
ಇದೇ ಸಂದಭರ್ದಲ್ಲಿ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳಿಗೆ ಪ್ರತಿಜ್ಞ್ಞಾವಿಧಿ ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಾರ್ವತಿ ಅಪ್ಪಯ್ಯ, ಪ್ರಾದ್ಯಾಪಕರಾದ ಟಿ.ಡಿ.ತಿಮ್ಮಯ್ಯ, ಜಗತ್ ತಿಮ್ಮಯ್ಯ, ಗಾಯತ್ರಿದೇವಿ ಮತ್ತಿತರರು ಉಪಸ್ಥಿತರಿದ್ದರು.