×
Ad

ನಾಗರಿಕ ಸಮಾಜದಲ್ಲಿ ಇವರಿಗೆ ಬದುಕುವ ಹಕ್ಕಿಲ್ಲವೇ?

Update: 2016-08-10 22:17 IST

ಬಿ.ರೇಣುಕೇಶ್

ಶಿವಮೊಗ್ಗ, ಆ. 10: ಶಿವಮೊಗ್ಗ ನಗರದಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುವ ನಿರ್ಗತಿಕ ಮಹಿಳೆಯರು ಕಾಮುಕರ ಅಟ್ಟಹಾಸಕ್ಕೆ ಸಿಲುಕಿ ಅಕ್ಷರಶಃ ತತ್ತರಿಸಿ ಹೋಗುತ್ತಿದ್ದಾರೆ. ಲೈಂಗಿಕ ಶೋಷಣೆಯ ನರಕಯಾತನೆಗೆ ತುತ್ತಾಗಿ ನರಳುತ್ತಿದ್ದಾರೆ. ನಗರದ ಖಾಸಗಿ ಬಸ್ ನಿಲ್ದಾಣದ ಸುತ್ತಮುತ್ತಲು ಸೇರಿದಂತೆ ಜನನಿಭಿಡ ಸ್ಥಳಗಳಲ್ಲಿ ಭಿಕ್ಷುಕಿಯರ ಮೇಲೆ ಕಾಮುಕರು ದಾಳಿ ನಡೆಸುತ್ತಿದ್ದಾರೆ. ವಿವಿಧ ರೋಗ-ರುಜಿನಗಳಿಂದ ಬಳಲುತ್ತಿರುವವರು, ಅಂಗವಿಕಲ, ವಯೋವೃದ್ಧ ಮಹಿಳೆಯರು ಕೂಡ ಕಾಮುಕರ ಕಾಮತೃಷೆಗೆ ಬಲಿಯಾಗುತ್ತಿದ್ದಾರೆ. ಸ್ವತಃ ಭಿಕ್ಷುಕಿಯರೇ ತಾವು ಅನುಭವಿಸುತ್ತಿರುವ ನೋವಿನ ಬಗ್ಗೆ ಹೇಳಿಕೊಳ್ಳುತ್ತಾರೆ. ಬಹುತೇಕ ಈ ಲೈಂಗಿಕ ದೌರ್ಜನ್ಯಗಳು ಮಧ್ಯರಾತ್ರಿಯ ನಂತರವೇ ನಡೆಯುತ್ತಿವೆ. ಬಸ್‌ನಿಲ್ದಾಣ, ಫುಟ್‌ಪಾತ್, ನಿರ್ಜನ ಸ್ಥಳಗಳಲ್ಲಿ ಮಲಗಿ ನಿದ್ರಿಸುವ ಭಿಕ್ಷುಕ ಮಹಿಳೆಯರ ಮೇಲೆರೆಗುವ ಕಾಮುಕರು, ಇನ್ನಿಲ್ಲದ ಹಿಂಸೆ ನೀಡುತ್ತಿದ್ದಾರೆ. ಜೊತೆಗೆ ಹಗಲಿಡಿ ಭಿಕ್ಷೆ ಬೇಡಿ ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಕಿತ್ತುಕೊಂಡು ಹೋಗುತ್ತಿದ್ದಾರೆ. ದೌರ್ಜನ್ಯದ ವಿರುದ್ಧ ಪ್ರತಿಭಟಿಸುವವರ ಮೇಲೆ ಹಲ್ಲೆ ಕೂಡ ನಡೆಸುತ್ತಿದ್ದಾರೆ. ಕಾಮುಕರಿಂದ ಇಷ್ಟೆಲ್ಲ ದೌರ್ಜನ್ಯಕ್ಕೀಡಾದರೂ ಭಿಕ್ಷುಕ ಮಹಿಳೆಯರು ಪೊಲೀಸ್ ಠಾಣೆಗಾಗಲಿ ಅಥವಾ ಇತರರ ಬಳಿಯಾಗಲಿ ತಮ್ಮ ದೂರು ಹೇಳಿಕೊಳ್ಳಲು ಮುಂದಾಗುತ್ತಿಲ್ಲ. ಇವರ ಮೇಲೆ ದೌರ್ಜನ್ಯ ನಡೆಯುತ್ತಿರುವುದರ ಅರಿವಿರುವ ಕೆಲ ನಾಗರಿಕರು ಕೂಡ ಭಿಕ್ಷುಕಿಯರೆಂಬ ತಾತ್ಸಾರದಿಂದ ನೆರವಿಗೆ ಧಾವಿಸುವುದಾಗಲಿ ಅಥವಾ ರಕ್ಷಣೆ ಮಾಡುವ ಗೋಜಿಗೂ ಹೋಗುತ್ತಿಲ್ಲ. ಇದರಿಂದ ಭಿಕ್ಷುಕಿಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳು ಬೆಳಕಿಗೆ ಬರುತ್ತಿಲ್ಲ. ಮತ್ತೊಂದೆಡೆ ಕಾಮುಕರು ಕೂಡ ತಮ್ಮ ಹೇಯ ಕೃತ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಭಿಕ್ಷುಕಿಯರು ಕೂಡ ರಾತ್ರಿಯ ವೇಳೆ ನಿರಂತರವಾಗಿ ಕಾಮುಕರ ಅಟ್ಟಹಾಸಕ್ಕೆ ತುತ್ತಾಗುವಂತಹ ದುರಂತ ಸ್ಥಿತಿ ನಿರ್ಮಾಣವಾಗಿದೆ. ಎಲ್ಲಿದೆ ನ್ಯಾಯ?: ಮಹಿಳೆಯರ ರಕ್ಷಣೆಯ ಬಗ್ಗೆ ಹತ್ತು ಹಲವು ಕಾನೂನುಗಳಿವೆ. ಇಲಾಖೆ, ಸಂಘ ಸಂಸ್ಥೆಗಳಿವೆ. ನೂರಾರು ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುತ್ತದೆ. ವರ್ಷವಿಡೀ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ, ಸಮಾಜದ ಕಟ್ಟಕಡೆಯಲ್ಲಿರುವ, ನಾಗರಿಕ ಸಮಾಜದ ವಕ್ರದೃಷ್ಟಿಗೆ ಒಳಗಾದ ಭಿಕ್ಷುಕಿಯರಿಗೆ ನಾಗರಿಕ ಸಮಾಜದ ಕಣ್ಣೆದುರಲ್ಲೇ ಆಗುತ್ತಿರುವ ಅನ್ಯಾಯದ ಸರಮಾಲೆಗೆ ನ್ಯಾಯ ಕೊಡಿಸುವುದಿರಲಿ, ಸಾಂತ್ವನ ಹೇಳುವವರು ಇಲ್ಲವಾಗಿರುವುದು ನಿಜಕ್ಕೂ ವ್ಯವಸ್ಥೆಯ ಲೋಪಕ್ಕಿಡಿದ ಕೈಗನ್ನಡಿಯಾಗಿದೆ. ಇನ್ನಾದರೂ ಸಂಬಂಧಿಸಿದ ಇಲಾಖೆ, ಸಂಘ ಸಂಸ್ಥೆಗಳು ಎಚ್ಚೆತ್ತುಕೊಳ್ಳಬೇಕು. ರಾಜ್ಯದಲ್ಲಿರುವ ಭಿಕ್ಷುಕಿಯರ ನೆರವಿಗೆ ಧಾವಿಸಬೇಕು. ಕಾಮುಕರ ಅಟ್ಟಹಾಸದಿಂದ ಮುಕ್ತಿ ಕಲ್ಪಿಸಬೇಕು. ಅವರು ಕೂಡ ನಾಗರಿಕ ಸಮಾಜದಲ್ಲಿ ನೆಮ್ಮದಿಯಾಗಿ ಜೀವನ ನಡೆಸುವ ವ್ಯವಸ್ಥೆ ಕಲ್ಪಿಸಲು ಪ್ರಾಮಾಣಿಕ ಕ್ರಮಕೈಗೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ರಾತ್ರಿ ವೇಳೆ ಬಸ್ ನಿಲ್ದಾಣದಲ್ಲಿ ಮಹಿಳೆಯರು ಓಡಾಡುವುದೇ ದುಸ್ತರ

ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ತಡರಾತ್ರಿ ವೇಳೆ ಮಹಿಳೆಯರು ಓಡಾಡುವುದೇ ದುಸ್ತರ ಎಂಬಂತಹ ಪರಿಸ್ಥಿತಿಯಿದೆ. ಕಾಮುಕರು, ಕಳ್ಳಕಾಕರ ಹಾವಳಿ ವಿಪರೀತವಾಗಿದ್ದು, ಬಸ್ ನಿಲ್ದಾಣದ ಆವರಣದಲ್ಲಿರುವ ಅರ್ಧದಷ್ಟು ಲೈಟ್‌ಗಳು ದುರಸ್ತಿಯಲ್ಲಿವೆ. ಬಸ್ ನಿಲ್ದಾಣದ ಹಲವು ಭಾಗಗಳಲ್ಲಿ ಕತ್ತಲು ಆವರಿಸಿರುತ್ತದೆ. ಕತ್ತಲಿರುವ ಸ್ಥಳಗಳಲ್ಲಿ ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿರುತ್ತವೆ. ಮಹಾನಗರ ಪಾಲಿಕೆ ಆಡಳಿತದ ಅಸಮರ್ಪಕ ನಿರ್ವಹಣೆಯಿಂದ ರಾತ್ರಿ ವೇಳೆ ಬಸ್ ನಿಲ್ದಾಣವು ಅಸುರಕ್ಷಿತ ವಲಯವಾಗಿ ಪರಿಣಮಿಸಿದೆ. ಇನ್ನಾದರೂ ಬಸ್‌ನಿಲ್ದಾಣದಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸಲು ಪಾಲಿಕೆ ಆಡಳಿತ ಕ್ರಮಕೈಗೊಳ್ಳಬೇಕಾಗಿದೆ ಎಂದು ಬಸ್ ನಿಲ್ದಾಣದ ವರ್ತಕರೊಬ್ಬರು ಹೇಳುತ್ತಾರೆ.

ಹಗಲು ಅನ್ನಕ್ಕಾಗಿ ಹೋರಾಟ... ರಾತ್ರಿ ರಕ್ಷಣೆಗೆ ಪರದಾಟ

 ಹಗಲು ಹೊತ್ತು ತುತ್ತು ಅನ್ನಕ್ಕಾಗಿ ಗಲ್ಲಿ ಗಲ್ಲಿ ಸುತ್ತಿ, ಕಂಡಕಂಡವರಿಗೆ ಕೈಮುಗಿದು, ಬಿಸಿಲು-ಮಳೆ-ಚಳಿಯೆನ್ನದೆ ಭಿಕ್ಷೆ ಬೇಡಿ ಹಣ ಸಂಗ್ರಹಿಸುತ್ತೇವೆ. ರಾತ್ರಿ ವೇಳೆ ಬಸ್‌ನಿಲ್ದಾಣ, ರೈಲ್ವೆ ನಿಲ್ದಾಣ ಪುಟ್‌ಪಾತ್‌ಗಳಲ್ಲಿ ಮಲಗಿಕೊಳ್ಳುತ್ತೇವೆ. ಈ ವೇಳೆ ಕೆಲವರು ನಮ್ಮ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಹಾಕಿ ಇದ್ದ ಹಣವೆಲ್ಲ ಕಿತ್ತುಕೊಳ್ಳುತ್ತಾರೆ. ಇನ್ನೂ ಕೆಲವರು ಭಿಕ್ಷುಕಿಯರೊಂದಿಗೆ ಕೆಟ್ಟದಾಗಿ ವರ್ತಿಸುತ್ತಾರೆ. ಇದು ಸರ್ವೇಸಾಮಾನ್ಯ ಎಂಬಂತಾಗಿದೆ. ಏನು ಮಾಡಲಾಗದ ಸ್ಥಿತಿ ನಮ್ಮದ್ದಾಗಿದೆ. ಹತ್ತು ಹಲವು ರೋಗಗಳಿಂದ ಜರ್ಝರಿತರಾಗಿ ಹೋಗಿರುವ ನಮ್ಮ ಗೋಳನ್ನು ಆಲಿಸುವವರ್ಯಾರು ಇಲ್ಲವಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News