ಸರಕಾರಿ ಶಿಕ್ಷಣ ಸಂಸ್ಥೆಗಳಿಗೆ ಭೂಮಿ ಮಂಜೂರು: ಸರ್ವೇ ಕಾರ್ಯಕ್ಕೆ ಅತಿಕ್ರಮಣದಾರರಿಂದ ಪ್ರತಿರೋಧ

Update: 2016-08-11 11:22 GMT

ಭಟ್ಕಳ, ಆ.11: ಭಟ್ಕಳದಲ್ಲಿ ವಿವಿಧ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಸರಕಾರಿ ಪದವಿ ಕಾಲೇಜು, ಪದವಿ ಪೂರ್ವ ಕಾಲೇಜು, ಐಟಿಐ ಕಾಲೇಜು ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ಚೆನ್ನಮ್ಮ ವಸತಿ ಶಾಲೆಗಳಿಗೆ ಸರಕಾರ ಹೆಬಳೆ ಗ್ರಾಮದ ಸರ್ವೇ ನಂಬರ್ 406 ಮತ್ತು 402 ರಲ್ಲಿ ಸುಮಾರು 19 ಎಕರೆ ಭೂಮಿಯನ್ನು ಮಂಜೂರು ಮಾಡಿದ್ದು, ಸರ್ವೇ ಕಾರ್ಯವನ್ನು ಕೈಗೊಂಡ ಕಂದಾಯ ಇಲಾಖಾಧಿಕಾರಿಗಳಿಗೆ ಸ್ಥಳೀಯ ಅತಿಕ್ರಮಣದಾರರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ ಘಟನೆ ಜರಗಿದೆ.

ತಾಲೂಕಿನ ಹೆಬಳೆ ಗ್ರಾಮದ ಸರಕಾರಿ ಭೂಮಿ ಸರ್ವೇ ನಂಬರ್ 402 ಮತ್ತು 406ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ತಲಾ 4 ಎಕರೆ, ಸರಕಾರಿ ಪದವಿ ಪೂರ್ವ ಕಾಲೇಜಿಗೆ 2 ಎಕರೆ, ಪದವಿ ಕಾಲೇಜಿಗೆ 3 ಎಕರೆ, ಆಟದ ಮೈದಾನಕ್ಕಾಗಿ 4 ಎಕರೆ ಜಮೀನನ್ನು ಬಳಸಲು ತೀರ್ಮಾನಿಸಲಾಗಿದೆ. ಐಟಿಐ ಕಾಲೇಜಿಗೆ 5 ಎಕರೆ ಭೂಮಿಯ ಬೇಡಿಕೆಯನ್ನು ಪ್ರಸ್ತಾವನೆಯಲ್ಲಿ ಸೇರಿಸಲಾಗಿತ್ತಾದರೂ ಕೇವಲ 2 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ.

ಬುಧವಾರ ಕಂದಾಯ ಅಧಿಕಾರಿಗಳು ಪೊಲೀಸ್ ಭದ್ರತೆಯೊಂದಿಗೆ ಸ್ಥಳಕ್ಕೆ ತೆರಳಿ ಸರ್ವೇ ನಡೆಸಿದ್ದು, ಗಡಿ ಗುರುತು ಕಾರ್ಯ ನಡೆಸಿದರು. ಈ ಹಿಂದೆ ಬೆಳಕೆ ಹಡೀನ್ ಭಾಗದ ಅರಣ್ಯ ಭೂಮಿಯಲ್ಲಿ ಶಾಲಾ ಕಾಲೇಜುಗಳನ್ನು ಕಟ್ಟಲು ಪ್ರಸ್ತಾವನೆ ಸಲ್ಲಿಸಲಾಗಿತ್ತಾದರೂ ಅರಣ್ಯ ಇಲಾಖೆಯಿಂದ ಅನುಮತಿ ಸಿಗದೇ ಅರ್ಜಿಗಳೆಲ್ಲ ಕಚೇರಿಯಿಂದ ಕಚೇರಿ ಅಲೆದು ವರ್ಷಗಳು ಉರುಳಿ ಹೋಗಿದ್ದವು. ಅರಣ್ಯ ಭೂಮಿಯನ್ನು ವರ್ಗಾಯಿಸುವುದು ಕಷ್ಟಕರವಾಗಿ ಪರಿಣಮಿಸಿದ ಹಿನ್ನೆಲೆಯಲ್ಲಿ ಈ ಹಿಂದಿನ ಜಿಲ್ಲಾಧಿಕಾರಿ ಉಜ್ವಲ್ ಘೋಷ್, ಭಟ್ಕಳದಲ್ಲಿ ಸರಕಾರಿ ಭೂಮಿಯ ಪರಿಮಾಣದ ಬಗ್ಗೆ ಮಾಹಿತಿ ಕೇಳಿದ್ದರು. ಈ ನಡುವೆ ಹೆಬಳೆ ಸರಕಾರಿ ಭೂಮಿಯನ್ನು ಕೆಲವರು ಅತಿಕ್ರಮಿಸಿಕೊಂಡು ಮಾರಾಟ ಮಾಡಿರುವುದಲ್ಲದೇ, ಹೆಬಳೆ ಭಾಗದಲ್ಲಿ ಭೂ ಮಾಫಿಯಾ ಸಕ್ರಿಯವಾಗಿರುವ ಬಗ್ಗೆಯೂ ಕೆಲವರು ಜಿಲ್ಲಾಧಿಕಾರಿಗಳ ಗಮನವನ್ನು ಸೆಳೆದಿದ್ದರು. ಪರಿಣಾಮವಾಗಿ ಜಿಲ್ಲಾಧಿಕಾರಿಗಳು ಈ ಭೂಮಿಯನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಉಪಯೋಗಿಸಿಕೊಳ್ಳಲು ತೀರ್ಮಾನಿಸಿ ಸರಕಾರದ ಮೊರೆ ಹೋಗಿದ್ದು, ಸರಕಾರ ಒಪ್ಪಿಗೆಯ ಮುದ್ರೆಯನ್ನು ಹಾಕಿದೆ.

 ಅತಿಕ್ರಮಣದಾರರಿಂದ ಪ್ರತಿರೋಧ

ಭಟ್ಕಳ ತಾಲೂಕು ಹೆಬಳೆ ಗ್ರಾಮದ ಸರ್ವೇ ನಂಬರ್ 406 ಮತ್ತು 402ರಲ್ಲಿನ ಹಾಡಿ ಜಮೀನಿನಲ್ಲಿ ರೈತರು ಸಾಗುವಳಿ ಮಾಡಿಕೊಂಡಿದ್ದು, ಭೂ ಮಂಜೂರಾತಿಗಾಗಿ ಸಲ್ಲಿಸಿದ ಅರ್ಜಿ ವಿಲೇವಾರಿಯಾಗುವ ಮೊದಲೇ ಕಂದಾಯ ಅಧಿಕಾರಿಗಳು ಕಾಲೇಜು ನಿರ್ಮಾಣಕ್ಕಾಗಿ ಭೂಮಿಯನ್ನು ನಮ್ಮಿಂದ ಕಸಿದುಕೊಂಡಿರುವುದು ನಮಗೆ ಮಾಡಿರುವ ಅನ್ಯಾಯವಾಗಿದೆ ಎಂದು ಅತಿಕ್ರಮಣದಾರರು ಅಸಮಾಧಾನ ವ್ಯಕ್ತಪಡಿಸಿ ಸರ್ವೇ ಕಾರ್ಯಕ್ಕೆ ವಿರೋಧ ಒಡ್ಡಿದರು.

ಸರಕಾರಿ ಕಾಲೇಜು ಕಟ್ಟಡಗಳಿಗಾಗಿ ಹಡೀನ ಗ್ರಾಮದ ಸರ್ವೆ ನಂಬರ್ 65ರಲ್ಲಿ 30 ಎಕರೆ ಜಮೀನನ್ನು ಕಾಯ್ದಿರಿಸಿದ್ದು, ಇದೀಗ ಮತ್ತೆ ರೈತರು ಸಾಗುವಳಿ ಮಾಡಿದ ಜಮೀನನ್ನು ವಶಕ್ಕೆ ತೆಗೆದುಕೊಳ್ಳಲು ಮುಂದಾಗಿರುವುದು ಕಾನೂನು ಬಾಹಿರವಾಗಿದೆ. ನಾವು ಈಗ ವಾಸಿಸುತ್ತಿರುವ ನಿವೇಶನವು ಸಿಆರ್‌ಝೆಡ್ ವ್ಯಾಪ್ತಿಗೆ ಬರುತ್ತಿದ್ದು, ನಮಗೆ ಈ ಜಾಗ ಬಿಟ್ಟರೆ ಬೇರೆ ಎಲ್ಲಿಯೂ ನೆಲೆ ಇಲ್ಲವಾಗಿದೆ. ನೀರು ತುಂಬಿದರೆ ಊರು ಬಿಟ್ಟು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಸಮಸ್ಯೆಯನ್ನು ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರ ಗಮನಕ್ಕೆ ತರಲಾಗಿದ್ದು, ಅವರ ಆದೇಶವನ್ನೂ ಕಡೆಗಣಿಸಿ ಸರ್ವೇ ನಡೆಸಲಾಗಿದೆ ಎಂದು ಅವರು ಅಸಮಾಧಾನವನ್ನು ಹೊರ ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News