ಮುಂಡಗೋಡ : ವಾಂತಿ ಬೇಧಿಯಿಂದ 30ಕ್ಕೂ ಅಧಿಕ ಮಂದಿ ಅಸ್ವಸ್ಥ ; ಆಸ್ಪತ್ರೆಗೆ ದಾಖಲು

Update: 2016-08-11 11:28 GMT

ಮುಂಡಗೋಡ, ಆ.11: ಸಾಮೂಹಿಕವಾಗಿ ವಾಂತಿ-ಬೇಧಿ ಕಾಣಿಸಿಕೊಂಡು ಸುಮಾರು 30ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಬಾಚಣಕಿ ಗ್ರಾ.ಪಂ. ವ್ಯಾಪ್ತಿಯ ನ್ಯಾಸರ್ಗಿ ಗ್ರಾಮದಲ್ಲಿ ನಡೆದಿದೆ.

ಕುಡಿಯುವ ನೀರಿನ ಅಶುದ್ಧತೆಯೇ ಈ ಸಾಂಕ್ರಾಮಿಕ ರೋಗಕ್ಕೆ ಕಾರಣವಿರಬಹುದೆಂದು ಶಂಕಿಸಲಾಗಿದೆ. ಕೆಲ ದಿನಗಳ ಹಿಂದೆ ನೀರು ಸರಬರಾಜು ಪೈಪ್‌ಲೈನ್ ಒಡೆದಿದ್ದು, ಇದರಲ್ಲಿ ಕೊಳಕು ನೀರು ಸೇರಿಕೊಂಡಿರುವುದು ರೋಗ ಹರಡಲು ಕಾರಣವೆಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಈವರೆಗೂ 4 ಚಿಕ್ಕಮಕ್ಕಳು ಸೇರಿದಂತೆ 30ಕ್ಕೂ ಹೆಚ್ಚು ಜನ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಪೈಕಿ 20 ಜನ ಗುಣಮುಖರಾಗಿದ್ದು, ಇನ್ನುಳಿದವರಿಗೆ ಚಿಕಿತ್ಸೆ ಮುಂದುವರೆದಿದೆ. ತಾಲೂಕು ವೈದ್ಯಾಧಿಕಾರಿಗಳು ಕುಡಿಯುವ ನೀರಿನ ಸ್ಯಾಂಪಲ್ ಅನ್ನು ಸಂಗ್ರಹಿಸಿದ್ದು, ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಲಾಗಿದೆ.

ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮದ ಪ್ರತಿ ಮನೆಗೂ ಭೇಟಿ ನೀಡಿ ಕುಡಿಯುವ ನೀರಿನ ಶುದ್ಧತೆಯನ್ನು ಕಾಯ್ದುಕೊಳ್ಳುವ ಕುರಿತು ಅರಿವು ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News