×
Ad

ಜನಸಂಪರ್ಕ ಸಭೆಯಲ್ಲಿ ಶಾಸಕರ ಕಡೆಗಣನೆ: ಎಚ್.ಡಿ. ರೇವಣ್ಣ ಆರೋಪ

Update: 2016-08-11 20:50 IST

ಹಾಸನ, ಆ.11: ಜನಸಂಪರ್ಕ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರನ್ನು ಸೌಜನ್ಯಕ್ಕೂ ಆಹ್ವಾನಿಸದೆ ಕಡೆಗಣಿಸಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆರೋಪಿಸಿದ್ದಾರೆ.

ನಗರದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ನಾನಾ ತಾಲೂಕಿನಲ್ಲಿ ನಡೆಸಲಾದ ಜನಸಂಪರ್ಕ ಸಭೆಗೆ ಅಲ್ಲಿನ ಯಾವ ಶಾಸಕರನ್ನೂ ಕರೆಯದೆ ನಿಯಮ ಉಲ್ಲಂಘಿಸಿದ್ದಾರೆ. ಜನರ ಯಾವ ಸಮಸ್ಯೆಯನ್ನೂ ನಿವಾರಿಸದೆ ಕೇವಲ ಅರ್ಜಿಯನ್ನು ಪಡೆದು ಭರವಸೆ ಮಾತ್ರ ನೀಡುತ್ತಿದ್ದಾರೆ ಎಂದು ದೂರಿದರು.

ಹೊಳೆನರಸೀಪುರ ತಾಲೂಕಿನಲ್ಲಿ ತಾವು ಯಾವುದೇ ಇಲಾಖೆಯ ಸಭೆ ಮಾಡಿಲ್ಲ ಎಂದು ಆರೋಪ ಮಾಡಿರುವ ಸಚಿವರು ತಮ್ಮ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ನನಗೆ ಹೇಳಿಕೊಡಬೇಕಾದ ಅವಶ್ಯಕತೆ ಇಲ್ಲ ಎಂದು ಖಾರವಾಗಿ ನುಡಿದರು. ಜಿಲ್ಲೆಯಲ್ಲಿ ಇಂತಹ ರಾಜಕಾರಣ ಬಹಳ ದಿನಗಳ ಕಾಲ ನಡೆಯುವುದಿಲ್ಲ. ಕೂಡಲೇ ಇಂತಹದನ್ನೆಲ್ಲಾ ನಿಲ್ಲಿಸಿ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುವಂತೆ ಸಲಹೆ ನೀಡಿದರು. ನಮ್ಮ ಕಡೆಯಿಂದ ಇಲಾಖೆಯಲ್ಲಿ ಹಣ ವಿನಿಯೋಗವಾಗದೆ ವಾಪಸ್ ಹೋಗಿದ್ದರೆ ಹೇಳಲಿ ಕೇಳುತ್ತೇನೆ. ರಾಜಕೀಯ ಬಿಟ್ಟು ಸ್ಥಳೀಯ ಶಾಸಕರನ್ನು ಕರೆದು ಸಭೆ ಮಾಡಬೇಕು ಎಂದು ಸಲಹೆ ನೀಡಿದರು.

ಅಮೃತ ಜಲಧಾರೆಗೆ ಈಗಾಗಲೇ 121 ಕೋಟಿ ರೂ. ಟೆಂಡರ್ ಕರೆಯಲಾಗಿದೆ. ಆದರೇ ಸುಮಾರು 600 ಕೋಟಿ ರೂ.ಹಾಸನದಲ್ಲಿ ಕುಡಿಯುವ ನೀರಿಗೆ ಬೇಕಾಗಲಿದೆ ಎಂದ ಅವರು ಕುಡಿಯುವ ನೀರಿಗಾಗಿ ಮತ್ತೆ ಹಣವನ್ನು ಕೇಳಿರುವುದಾಗಿ ಹೇಳಿದರು. ಇದೆ ವೇಳೆ ಕ್ಷೇತ್ರದ ಶಾಸಕ ಎಚ್.ಎಸ್. ಪ್ರಕಾಶ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ್ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News