ಜಲ ಸಂರಕ್ಷಣೆ, ಶುಚಿತ್ವದ ಬಗೆ್ಗ ಅರಿವು ಅಗತ್ಯ: ನ್ಯಾಯಾಧೀಶ ಡಿ.ಪವನೇಶ್
ಮಡಿಕೇರಿ, ಆ.11: ಜಲ ಸಂರಕ್ಷಣೆ ಮತ್ತು ಪರಿಸರ ಶುಚಿತ್ವದ ಕಡೆ ಹೆಚ್ಚಿನ ಗಮನ ಅಗತ್ಯವಾಗಿದೆ ಎಂದು ಒಂದನೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಪವನೇಶ್ ಹೇಳಿದ್ದಾರೆ.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಪಂಚಾಯತ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಮತ್ತು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಜಲ ಸಂರಕ್ಷಣೆ ಮತ್ತು ಶುಚಿತ್ವದ ಕುರಿತು ನಡೆದ ವಿಚಾರ ಸಂಕಿರಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಪ್ರಪಂಚದ ಪ್ರತಿಯೊಂದು ಜೀವಿಗೂ ನೀರಿನ ಆವಶ್ಯಕತೆ ಇದೆ. ಶುದ್ಧ್ದ ನೀರಿಲ್ಲದೆ ಬದುಕಲು ಸಾಧ್ಯವಿಲ್ಲ. ಪ್ರತೀ ಗ್ರಾಮ, ನಗರಗಳಲ್ಲಿ ಕುಡಿಯುವ ನೀರನ್ನು ಪಡೆಯುವ ಹಕ್ಕು ಪ್ರತಿಯೊಬ್ಬ ವ್ಯಕ್ತಿಗೂ ಇದೆ. ಆದ್ದರಿಂದ ಜಲ ಸಂರಕ್ಷಣೆ ಮತ್ತು ಪರಿಸರ ಶುಚಿತ್ವದ ಕಡೆ ಹೆಚ್ಚಿನ ಗಮನ ನೀಡುವುದು ಅಗತ್ಯ ಎಂದು ಅವರು ಹೇಳಿದರು. ಜಿಲ್ಲಾ ಸಮಾಲೋಚಕ ಎ.ಎಂ.ಸೂರಜ್ ಮಾತನಾಡಿ, ಶುದ್ಧ ಕುಡಿಯುವ ನೀರು ಪಡೆಯುವಲ್ಲಿ ಪ್ರತಿಯೊಬ್ಬರೂ ಕಾರ್ಯಯೋಜನೆಯನ್ನು ಮಾಡಿಕೊಳ್ಳಬೇಕು. ಸ್ವತಃ ಸುತ್ತಮುತ್ತಲಿನ ಪರಿಸರದಲ್ಲಿ, ಮನೆಗಳಲ್ಲಿ ಮಳೆ ನೀರಿನ ಸಂಗ್ರಹ, ನೀರಿನ ಮಿತ ಬಳಕೆಯಂತಹ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್‌ಪ್ರಭು ಮಾತನಾಡಿದರು. ಸರಕಾರಿ ಪ್ರ.ದ.ಮಹಿಳಾ ಕಾಲೇಜಿನ ಪ್ರಾಂಶುಪಾಲ ಜೆನಿಫರ್ ಲೋಲಿಟಾ, ವಕೀಲರ ಸಂಘದ ಅಧ್ಯಕ್ಷ ಸಿ.ಟಿ.ಜೋಸೆಫ್, ಕ.ರಾ.ಮಾ.ನಿ ಮಂಡಳಿ ಪರಿಸರಾಧಿಕಾರಿ ಜಿ.ಆರ್. ಗಣೇಶನ್, ವಕೀಲ ಪಿ.ಪುಂಡರಿಕ, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಜಯಪ್ಪ, ಸ.ಪ್ರ.ದ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಕೆ.ಡಿ.ದಯಾನಂದ ಮತ್ತಿತರರು ಹಾಜರಿದ್ದರು.